ಬೆಂಗಳೂರು,ಜೂ.21: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಕೂರಲು ವಿದ್ಯಾರ್ಥಿಗಳಿಗೆ ಎದುರಾಗಿರುವ ನೆಟ್ ವರ್ಕ್, ಇಂಟರ್ನೆಟ್ ಸಮಸ್ಯೆ ಪರಿಹರಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಶೈಕ್ಷಣಿಕ ವರ್ಷ ಪುನರಾರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ವಿಶಿಷ್ಟ ಸಮಸ್ಯೆಗೆ ನಾವು ಸಾಕ್ಷಿ ಆಗುತ್ತಿದ್ದೇವೆ. ಮುಂಗಾರು ಆರಂಭಾದಾಗಿನಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಕಳೆದ ಕೆಲವು ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬಳ ಮೊಬೈಲ್ ಕಲಿಕಾ ಚಿತ್ರ ಇಂದಿನ ಸ್ಥಿತಿಗತಿ ವಿವರಿಸಲಿದ್ದು, ಇದು ನಿಜಕ್ಕೂ ಮನಕಲಕುವ ಸಂಗತಿಗಳಾಗಿವೆ.
ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ದೊರೆಯದೇ ಗ್ರಾಮೀಣ ಪ್ರದೇಶದ ಮಕ್ಕಳು ಬೆಟ್ಟ ಗುಡ್ಡಗಳನ್ನು ಹತ್ತಿ ಕುಳಿತು ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಕುಳಿತು ಪಾಠದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಮಳೆಯಿಂದ ರಕ್ಷಿಸಲು ಪೋಷಕರು ಛತ್ರಿ ಹಿಡಿದು ಮಳೆಯಲ್ಲಿ ನಿಂತುಕೊಂಡ ಫೋಟೋಗಳು ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ನೆಟ್ವರ್ಕ್ ಸಮಸ್ಯೆಗೆ ಕೊನೆ ಹಾಡಲು ನೆಟ್ವರ್ಕ್ ಆಪರೇಟರ್ ಗಳ ಸಭೆ ನಡೆಸಿ ಪರಿಹಾರ ರೂಪಿಸಬೇಕೆಂದು ಸಚಿವ ಸುರೇಶ್ ಕುಮಾರ್, ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ, ಶಾಲೆಗಳು ತಮ್ಮದೇ ಸಂಪನ್ಮೂಲಗಳ ಆಧಾರದಲ್ಲಿ ಆನ್-ಲೈನ್ ಕಲಿಕೆಯನ್ನು ನಡೆಸಲು ಇಲಾಖೆ ಅನುಮತಿ ನೀಡಿದೆ. ಸರ್ಕಾರಿ ಶಾಲೆಗಳ ಶಿಕ್ಷಕರು, ಮೊಬೈಲ್ ವಾಟ್ಸಪ್ ಗ್ರೂಪ್ಗಳ ಮೂಲಕವೂ ಮಕ್ಕಳನ್ನು ಕಲಿಕೆಗೆ ತೊಡಗಿಸಿಕೊಳ್ಳಲಾಗುತ್ತಿದೆ. ನಮ್ಮದೇ ಯೂ-ಟ್ಯೂಬ್ ಚಾನೆಲ್ಗಳ ಮೂಲಕವೂ ದೂರದರ್ಶನದ ಚಂದನ ವಾಹಿನಿ ಮೂಲಕವೂ ಪಾಠ ಪ್ರವಚನಗಳು ಮುಂದುವರಿಯುವುದರಿಂದಹೊಸ ಸ್ಥಿತಿಗೆ ಹೊಂದಿಕೊಳ್ಳಲೇಬೇಕಿದೆ ಎಂದು ಸಹ ಸಚಿವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.