The Team of ‘Savarkar’ spread False News about Oscar Selection
ಪ್ರತಿ ವರ್ಷ ಭಾರತದಿಂದ ಆಸ್ಕರ್ ಸ್ಪರ್ಧೆಗೆ ಒಂದು ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಕಳಿಸಲಾಗುತ್ತದೆ. ‘ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ’ (Film Federation Of India) ಮೂಲಕ ಈ ಆಯ್ಕೆ ನಡೆಯುತ್ತದೆ. ಈ ವರ್ಷ ಕಿರಣ್ ರಾವ್ ನಿರ್ದೇಶನ ಮಾಡಿದ ‘ಲಾಪತಾ ಲೇಡೀಸ್’ ಸಿನಿಮಾ ಆಯ್ಕೆ ಆಗಿದೆ. ಆದರೆ ತಮ್ಮ ಸಿನಿಮಾ ಕೂಡ ಅಧಿಕೃತವಾಗಿ ಸಲ್ಲಿಕೆ ಆಗಿದೆ ಎಂದು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರತಂಡದವರು ಸುಳ್ಳು ಹೇಳಿದ್ರಿಂದ ಚಿತ್ರತಂಡದವರು ನಗೆಪಾಟಲಿಗೆ ಒಳಗಾಗಿದ್ದಾರೆ.
‘ಸ್ವಾತಂತ್ರ್ಯ ವೀರ್ ಸಾವರ್ಕರ್’ (Swatantrya Veer Savarkar) ಸಿನಿಮಾ ತಂಡದವರು ಕೂಡ ಇನ್ನೊಂದು ಸುದ್ದಿ ಹರಿಬಿಟ್ಟರು. ‘2025ರ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ನಮ್ಮ ಸಿನಿಮಾ ಅಧಿಕೃತವಾಗಿ ಸಲ್ಲಿಕೆ ಆಗಿದೆ. ಮೆಚ್ಚುಗೆ ನೀಡಿದ್ದಕ್ಕೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾಗೆ ಧನ್ಯವಾದಗಳು’ ಎಂದು ನಿರ್ಮಾಪಕರು ಸೋಶಿಯಲ್ ಮೀಡಿಯಾದಲ್ಲಿ (Social Media) ಬರೆದುಕೊಂಡಿದ್ದರು.
ನಿರ್ಮಾಪಕರು (Producers) ಹಂಚಿಕೊಂಡ ಮಾಹಿತಿ ನಿಜ ಎಂದು ತಿಳಿದ ಅನೇಕರು ಅಭಿನಂದನೆಗಳನ್ನು ತಿಳಿಸಲು ಆರಂಭಿಸಿದರು. ಇದರಿಂದಾಗಿ ಅನೇಕರಿಗೆ ಗೊಂದಲ ಮೂಡಿತು. ಒಂದು ದೇಶದಿಂದ 2 ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಲು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಲು ಶುರು ಮಾಡಿದರು. ಕಡೆಗೆ ತಿಳಿದ ವಿಚಾರ ಏನೆಂದರೆ, ‘ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ’ ವತಿಯಿಂದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಆಯ್ಕೆಯೇ ಆಗಿಲ್ಲ!
ಒಂದು ದೇಶದಿಂದ ಒಂದು ಸಿನಿಮಾವನ್ನು ಮಾತ್ರ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಕಳಿಸಬಹುದು. ಆದರೆ ಇನ್ನುಳಿದ ಸಿನಿಮಾ ತಂಡಗಳು ಪ್ರತ್ಯೇಕವಾಗಿ ಬೇಕಿದ್ದರೆ ಆಸ್ಕರ್ಗೆ ಸ್ಪರ್ಧೆ (Oscar Award) ನೀಡಬಹುದು. ಆದರೆ ಆ ರೀತಿ ಮಾಡಲು ಬಹುಕೋಟಿ ರೂಪಾಯಿ ಖರ್ಚು ಆಗುತ್ತದೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ತಂಡ ಕೂಡ ಆ ದಾರಿ ಅನುಸರಿಸಬಹುದು. ಹಾಗಿದ್ದರೆ, ‘ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ’ದ ಹೆಸರನ್ನು ಎಳೆದು ತರುವ ಅಗತ್ಯ ಇಲ್ಲ.
‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರದ ನಿರ್ಮಾಪಕರ ಎಡವಟ್ಟಿನಿಂದ ಅನಗತ್ಯವಾಗಿ ಗೊಂದಲ ಉಂಟಾಗಿದ್ದು, ಅಸಲಿ ವಿಷಯ ತಿಳಿದ ನಂತರ ನೆಟ್ಟಿಗರು ಈ ತಂಡಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಈ ಸಿನಿಮಾದಲ್ಲಿ ರಣದೀಪ್ ಹೂಡಾ (Randeep Hooda) ಅವರು ಸಾವರ್ಕರ್ ಪಾತ್ರವನ್ನು ಮಾಡಿದ್ದಾರೆ.