ಕಿಡ್ನಿ ಕಲ್ಲು, ಕಿಡ್ನಿ ವೈಫಲ್ಯ, ಕಿಡ್ನಿ ತೊಂದರೆ ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿರೋ ಆರೋಗ್ಯ (symptoms of Kidney problem) ಸಮಸ್ಯೆಗಳು.
ಕಿಡ್ನಿ(Kidney) ಸಮಸ್ಯೆ ಪುಟ್ಟ ಪುಟ್ಟ ಮಕ್ಕಳನ್ನೂ ಬಿಡುತ್ತಿಲ್ಲ ಗೊತ್ತಾ? ಎರಡು ಮೂರು ವರ್ಷದ ಮಕ್ಕಳಲ್ಲಿಯೇ ಕಿಡ್ನಿ ಸ್ಟೋನ್(Kidney stone) ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಇನ್ನು ಯುವಕರಲ್ಲಿ ಎರಡೂ ಕಿಡ್ನಿಗಳ ವೈಫಲ್ಯದ ಸಮಸ್ಯೆ ಕಾಮನ್ ಆಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ, ಅತಿಯಾದ ಮೆಡಿಸಿನ್‌ಗಳ ಸೇವನೆ ಹಾಗೂ ಕೆಟ್ಟ ಜೀವನ ಶೈಲಿ.
ಹುರುಳಿ ಬೀಜದಂತಿರುವ ಮೂತ್ರಪಿಂಡವು ದೇಹದ ಪ್ರಮುಖ ಭಾಗವಾಗಿದೆ. ಆದ್ದರಿಂದ ಮೂತ್ರಪಿಂಡದ ಆರೋಗ್ಯವನ್ನು ಕಾಳಜಿ ವಹಿಸುವುದು ಬಹಳ ಮುಖ್ಯ. ದೇಹದ ಹೆಚ್ಚುವರಿ ನೀರು,
ತ್ಯಾಜ್ಯ ವಸ್ತುಗಳು ಮತ್ತು ರಕ್ತದಿಂದ ಕಲ್ಮಶಗಳನ್ನು ಫಿಲ್ಟರ್ ಮಾಡುವುದು ಮತ್ತು ತೆಗೆದು ಹಾಕುವುದು ಇದರ ಮುಖ್ಯ ಕಾರ್ಯವಾಗಿದೆ.
ಫಿಲ್ಟರ್ ಮಾಡಿದ ನಂತರ ಈ ಎಲ್ಲಾ ತ್ಯಾಜ್ಯ ಉತ್ಪನ್ನಗಳು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತವೆ ಮತ್ತು ನಂತರ ಮೂತ್ರದ ಮೂಲಕ ಹೊರಬರುತ್ತವೆ.

ಮೂತ್ರಪಿಂಡದಲ್ಲಿ ಸಮಸ್ಯೆವುಂಟಾಗಲು ಅನೇಕ ಅಂಶಗಳು ಕಾರಣವಾಗಿರುತ್ತವೆ. ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂಬುವುದು ಎಷ್ಟೋ ಜನರಿಗೆ ಕೊನೆಯ ಹಂತದಲ್ಲಿ ಗೊತ್ತಾಗುತ್ತದೆ.
ಅಷ್ಟರೊಳಗೆ ಅವರ ಕಿಡ್ನಿ ಹಾಳಾಗಿರುತ್ತದೆ. ಆದರೆ ಕೆಲವು ಲಕ್ಷಣಗಳು ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಮೊದಲೇ ಕಂಡು ಹಿಡಿಯಲು ಸಹಾಯವಾಗುತ್ತದೆ, ಸಮಸ್ಯೆ ಗೊತ್ತಾದ ಕೂಡಲೇ ತಕ್ಷಣ ವೈದ್ಯರನ್ನು ಸಂಪರ್ಕಿಸಬಹುದು.
ಕಿಡ್ನಿ ಸಮಸ್ಯೆಗಳಿದ್ದರೆ ಈ ಲಕ್ಷಣಗಳು ಕಾಣಿಸುತ್ತವೆ
- ಹೆಚ್ಚು ದಣಿಯುವುದು
- ತುರಿಕೆ ಮತ್ತು ಒಣ ಚರ್ಮವನ್ನು ಹೊಂದುವುದು
- ಮೂತ್ರದಲ್ಲಿ ರಕ್ತ
- ಮೂತ್ರವು ನೊರೆಯಿಂದ ಕೂಡಿದ್ದರೆ
- ಸ್ನಾಯುಗಳ ಸೆಳೆತ
- ಪಾದಗಳು ಊದಿಕೊಳ್ಳುವುದು
- ಆಗಾಗ್ಗೆ ಮೂತ್ರ ವಿಸರ್ಜನೆ
- ಹಸಿವು ಕಡಿಮೆಯಾಗುವುದು

ಮೂತ್ರಪಿಂಡದ ಕಾಯಿಲೆ ಹೇಗೆ ಸಂಭವಿಸುತ್ತದೆ..?
ಮೂತ್ರಪಿಂಡವು ಅದರ ಕೆಲಸವನ್ನು ನಿಲ್ಲಿಸಿದಾಗ ಅಥವಾ ಮೂತ್ರಪಿಂಡದ ಕಾರ್ಯ ಚಟುವಟಿಕೆಗೆ ರೋಗವು ಅಡ್ಡಿಪಡಿಸಿದಾಗ ಕಾಯಿಲೆ ಸಂಭವಿಸುತ್ತದೆ. ಇದು ಹಲವಾರು ವರ್ಷಗಳವರೆಗೆ ಅಥವಾ ತಿಂಗಳುಗಳವರೆಗೆ ಸಂಭವಿಸುವುದರಿಂದ, ಮೂತ್ರಪಿಂಡವು ಹಾನಿಗೊಳಗಾಗಲು ಪ್ರಾರಂಭಿಸುತ್ತದೆ. ಅಧಿಕ ರಕ್ತದೊತ್ತಡ(Blood pressure) , ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್(Diabetes), ಅನುವಂಶಿಕ ಮೂತ್ರಪಿಂಡ ಕಾಯಿಲೆ, ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆ, ಮೂತ್ರಪಿಂಡದ ಕಲ್ಲು ಮುಂತಾದ ಸಮಸ್ಯೆಗಳು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಿರಬಹುದು. ಅಧಿಕ ತೂಕವು ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಈ ವಿಧಾನಗಳನ್ನು ಅನುಸರಿಸಿ :
- ಕಿಡ್ನಿ ಸಮಸ್ಯೆಯಿರುವವರು ಉಪ್ಪನ್ನು (Salt) ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
- ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯನ್ನು ಸಮತೋಲಿತ ಆಹಾರಗಳನ್ನು ಸೇವಿಸುವ ಮೂಲಕ ಹೆಚ್ಚಾಗದಂತೆ ಕಾಪಾಡಬಹುದು.
- ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ, ಏಕೆಂದರೆ ಇದರಿಂದ ರೋಗ ಉಲ್ಬಣಗೊಳ್ಳಬಹುದು
- ಮಧುಮೇಹದ ಸಮಸ್ಯೆ ಇದ್ದರೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ (Sugar level). ಮೂತ್ರಪಿಂಡ ಕಾಯಿಲೆ ಇರುವವರಿಗೆ ಮಧುಮೇಹದ ಸಮಸ್ಯೆ ಇದ್ದಲ್ಲಿ ಅದು ರೋಗವನ್ನು ಉಲ್ಬಣಗೊಳಿಸಬಹುದು.
- ನಿಯಮಿತವಾಗಿ 30 ನಿಮಿಷಗಳ ಕಾಲ ವ್ಯಾಯಾಮ (Exercise) ಮಾಡುವುದರಿಂದ ಈ ರೋಗವು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ.
- ಮೂತ್ರಪಿಂಡ ಕಾಯಿಲೆಯ ಸಮಸ್ಯೆ ಇದ್ದವರಲ್ಲಿ ತೂಕ ಹೆಚ್ಚಾಗಬಹುದು. ತಜ್ಞರ ಸಲಹೆಯ ಮೇರೆಗೆ ತೂಕವನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಿ.
- ರಶ್ಮಿತಾ ಅನೀಶ್