ನವದೆಹಲಿ, ಮಾ. 12: ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಪಶ್ಚಿಮಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ರಾಜ್ಯಗಳಿಗೆ ಇದೇ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಐದು ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಧಿಕಾರಕ್ಕೆ ಎಲ್ಲಾ ಪಕ್ಷಗಳ ರಾಜಕೀಯ ಕಸರತ್ತು ಜೋರಾಗಿದೆ.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಅಬ್ಬರ ಜೋರಾಗಿದ್ದು, ಡಿಎಂಕೆ ಪಕ್ಷ ಶುಕ್ರವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 13 ಮಂದಿ ಮಹಿಳೆಯರು ಅಭ್ಯರ್ಥಿಗಳಾಗಿದ್ದಾರೆ. ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಕೊಲಥೂರ್ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಉದಯನಿಧಿ ಅವರನ್ನು ಚೆಪಾಕ್ನಿಂದ ಸ್ಪರ್ಧೆಗೆ ಇಳಿಸಲಾಗಿದೆ.
ಅದೇ ರೀತಿ ತಮಿಳುನಾಡಿನ ಸ್ಟಾರ್ ನಟ ಕಮಲ ಹಾಸನ್ ಅವರು ಇತ್ತೀಚೆಗೆಷ್ಟೇ ಮಕ್ಕಳ್ ನಿಧಿ ಮಯ್ಯಮ್ ಪಕ್ಷವನ್ನು ಸ್ಥಾಪಿಸಿದ್ದಾರೆ. ಕಮಲ ಹಾಸನ್ ಅವರು ಕೊಯಮತ್ತೂರ್ ದಕ್ಷಿಣದಿಂದ ಸ್ಪರ್ಧೆಗೆ ಇಳಿದಿದ್ದಾರೆ.
ತಮಿಳಿನ ಮತ್ತೋರ್ವ ನಟ ಹಾಗೂ ರಾಜಕಾರಣಿ ವಿಜಯ ಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷವು ಎಐಎಡಿಎಂಕೆ- ಬಿಜೆಪಿ ಮೈತ್ರಿಯನ್ನು ಕಡಿದುಕೊಂಡಿದೆ. ನಿರೀಕ್ಷೆ ಸ್ಥಾನಗಳು ಅಥವಾ ಕ್ಷೇತ್ರಗಳನ್ನು ಹಂಚಿಕೆ ಮಾಡದಿರುವುದೇ ಡಿಎಂಡಿಕೆ ಮೈತ್ರಿಯಿಂದ ಹೊರಬರಲು ಕಾರಣ ಎಂದು ಡಿಎಂಡಿಕೆ ಹೇಳಿದೆ.