ಚೆನ್ನೈ, ಮೇ. 27: ಕೊರೊನಾ ಎರಡನೇ ಅಲೆಯ ಸಂಕಷ್ಟ ಕಾಲದಲ್ಲಿ ದೇಶದ ಜನರ ನೆರವಿಗೆ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು ಧಾವಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ತಮಿಳುನಾಡಿನಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿನ ಬೆಡ್ಗಳ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಲಿದೆ. ಇದರಲ್ಲಿ 1,070 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡುತ್ತಿದ್ದು, ಇದುವರೆಗೂ 660 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈ, ಪ್ರಮುಖ ನಗರ ಮಧುರೈ ಸೇರಿದಂತೆ ಹಲವು ನಗರಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಸಮಾಜ ಸೇವಾ ಕಾರ್ಯದಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಹಾಗೂ ಕ್ರೆಡಾಯ್ ಕೂಡ ಕೈ ಜೋಡಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯ ನಿರ್ದೇಶಕ ಬಿ.ಶ್ರೀನಿವಾಸ್ ರೆಡ್ಡಿ, ಈಗ ನಮ್ಮ ದೇಶವು ಕೊರೊನಾದಂಥ ಭಯಾನಕ ವೈರಸ್ ವಿರುದ್ಧ ಹೋರಾಡುತ್ತಿದೆ. ದೇಶದ ಜನರ ಪ್ರಾಣ ರಕ್ಷಣೆ ಮಾಡುವುದು ನಮ್ಮ ಕಂಪನಿಯ ಜವಾಬ್ದಾರಿಯೂ ಆಗಿದೆ. ಈ ಜವಾಬ್ದಾರಿ ನಿಭಾಯಿಸಲು ಕಂಪನಿಯು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಗುರಿ ತಲುಪಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.