ಬೆಂಗಳೂರು, ಡಿ. 25: ತಮ್ಮ ಆಂತರಿಕ ಗೊಂದಲ, ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ದೂರಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರತಿ ಸಂದರ್ಭದಲ್ಲೂ ಪ್ರಚಾರ ಪಡೆಯಬೇಕು ಎನ್ನುವ ಕಾರಣಕ್ಕೆ ರಾಜ್ಯ ಬಿಜೆಪಿ ಶಾಸಕರು, ಸಚಿವರು ಏನೆಲ್ಲಾ ಮಾತನಾಡುತ್ತಿದ್ದಾರೆ. ಅವರಿಗೆ ಯಾರೂ ಹೇಳುವವರು, ಕೇಳುವವರು ಇಲ್ಲ. ತಮ್ಮ ಆಂತರಿಕ ಗೊಂದಲ, ವೈಫಲ್ಯಗಳನ್ನು ಮರೆಮಾಚಲು ಇಂತಹ ಹೇಳಿಕೆ ನೀಡುವ ಮೂಲಕ ಜನರ ಚರ್ಚೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಸಚಿವ ಸುಧಾಕರ್ ಅವರ ಹೇಳಿಕೆಗೆಲ್ಲ ಉತ್ತರ ಕೊಡುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಯಾವ ರೀತಿಯಲ್ಲಿ ಬೆಂಬಲ ಕೊಟ್ಟಿದೆ ಎಂದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಕೊರೊನಾ ಹೆಸರಲ್ಲಿ ಇವರು ಮಾಡಿದ ಭ್ರಷ್ಟಾಚಾರದಲ್ಲಿ ನಾವೂ ಭಾಗಿ ಆಗಬೇಕಿತ್ತೇ? ಇವರ ಭ್ರಷ್ಟಾಚಾರವನ್ನ ಜನರ ಮುಂದೆ ಇಟ್ಟಿದ್ದೇವೆ ಎಂದಿದ್ದಾರೆ.