ನವದೆಹಲಿ : ಯುಪಿಐ ಪಾವತಿ ಸೇವೆಗಳ ಮೇಲೆ ಕೇಂದ್ರ ಸರ್ಕಾರ ಹೆಚ್ಚುವರಿ ಶುಲ್ಕ ವಿಧಿಸಬಹುದು ಎಂಬ ವರದಿಗಳ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿರುವ ಹಣಕಾಸು ಸಚಿವಾಲಯ, ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಸೇವೆಯು ದೇಶದ ಆರ್ಥಿಕತೆಯನ್ನು ಡಿಜಿಟಲೀಕರಣ ಮಾಡುವ ದೃಷ್ಟಿಯಿಂದ ಮಹತ್ವದ ಕ್ರಮವಾಗಿದೆ. ಈ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.
ಇನ್ನು ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಕೇಂದ್ರ ಸರ್ಕಾರವು ಹಣಕಾಸಿನ ನೆರವು ನೀಡಿದೆ. ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಅಳವಡಿಸಿಕೊಳ್ಳಲು ಮತ್ತು ಪ್ರೋತ್ಸಾಹಿಸಲು ಈ ವರ್ಷವೂ ನೆರವು ಘೋಷಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರ UPI ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕವನ್ನು ಹೇರಬಹುದು ಎಂಬ ಊಹಾಪೋಹಗಳ ಮಧ್ಯೆ ಸ್ಪಷ್ಟೀಕರಣ ನೀಡಲಾಗಿದೆ. ಇನ್ನು ತಕ್ಷಣದ ಪಾವತಿ ಸೇವೆ (IMPS) ರಾಷ್ಟ್ರೀಯ ವಿದ್ಯುನ್ಮಾನ ನಿಧಿಗಳ ವರ್ಗಾವಣೆ (NEFT), ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ವ್ಯವಸ್ಥೆಗಳಿಗೆ ಶುಲ್ಕು ವಿಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಉದ್ಯಮ ಸಂಸ್ಥೆಯಾದ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಶೂನ್ಯ-ಎಂಡಿಆರ್ ಆಡಳಿತವನ್ನು ಹಿಂತೆಗೆದುಕೊಳ್ಳುವಂತೆ ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರವು ಟ್ವೀಟ್ನಲ್ಲಿ, “ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಸೇವೆಗಳನ್ನು ಸರ್ಕಾರ ಉತ್ತೇಜಿಸುತ್ತದೆ” ಎಂದು ಹೇಳಿದೆ.