ಅಸ್ಸಾಂನಲ್ಲಿ(Assam) ಕಳೆದ ಕೆಲವು ದಿನಗಳ ಹಿಂದೆ ಎಡಬಿಡದೆ ಸುರಿದ ಮಳೆಯಿಂದಾಗಿ ಅಲ್ಲಿನ ಜನ ಜೀವನ ತತ್ತರಗೊಂಡು ಸಂಪೂರ್ಣ ಅಸ್ತವ್ಯಸ್ತವಾಗಿ ಸಾವು ನೋವನ್ನು ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಭಾರೀ ಮಳೆ ಸುರಿದ ಪರಿಣಾಮ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಎಡಬಿಡದೆ ಸುರಿದ ಮಳೆಯಿಂದಾಗಿ ತೀವ್ರ ಪ್ರವಾಹ(Flood) ಉಂಟಾಗಿತ್ತು. ಇದು ರಾಜ್ಯದ ದಕ್ಷಿಣ ಭಾಗದಲ್ಲಿರುವ ಬರಾಕ್ ಕಣಿವೆಯಲ್ಲಿನ ಚಹಾ ತೋಟಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ.

ಬರಾಕ್ ಕಣಿವೆ ಮತ್ತು ಬ್ರಹ್ಮಪುತ್ರ ಕಣಿವೆಯ ನಡುವಿನ ರಸ್ತೆ ಸಂಪರ್ಕವು ಅಸ್ತವ್ಯಸ್ತಗೊಂಡಿರುವುದರಿಂದ, ಚಹಾ ಎಸ್ಟೇಟ್‌ಗಳು(Tea Estate) ಚಹಾ ರವಾನಿಸಲು ಸಾಧ್ಯವಾಗುತ್ತಿಲ್ಲ. ಇದು ಉದ್ಯಮಕ್ಕೆ ಗಂಭೀರ ಆರ್ಥಿಕ ಅಡಚಣೆಯನ್ನು ಉಂಟುಮಾಡುತ್ತಿದೆ. ಆ ಪ್ರದೇಶದ ಜೀವನೋಪಾಯದ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ಚಹಾ ಸಂಘ ಅಸ್ಸಾಂ ಸರ್ಕಾರದ(Assam Government) ಸಹಾಯವನ್ನು ಕೋರಿದೆ. ಈಗಾಗಲೇ ಹಲವಾರು ಸಾಂಪ್ರದಾಯಿಕ ಸಮಸ್ಯೆಗಳಿಂದ ಬಳಲುತ್ತಿರುವ ಬರಾಕ್ ವ್ಯಾಲಿ ಚಹಾ ಉದ್ಯಮ ಸದ್ಯ ಮತ್ತೊಂದು ಹೊಡೆತ ಕಂಡಿದೆ.
ದೀರ್ಘ ಆರ್ಥಿಕ ಹಿಂಜರಿತದ ಪರಿಸ್ಥಿತಿಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸಿದೆ. ಮೇ ಮೊದಲ ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಇಡೀ ಬರಾಕ್ ಕಣಿವೆ ತೀವ್ರ ಪ್ರವಾಹದ ಹಿಡಿತದಲ್ಲಿತ್ತು. ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವ ಎಲ್ಲಾ ನದಿಗಳು, ಚಟುವಟಿಕೆಗಳ ಮುಖ್ಯ ಕೇಂದ್ರವಾದ ಸಿಲ್ಚಾರ್ ಸೇರಿದಂತೆ ಆ ಪ್ರದೇಶದ ಹಲವಾರು ಪಟ್ಟಣಗಳನ್ನು ಮುಳುಗಿಸುವುದರ ಜೊತೆಗೆ ಹಲವಾರು ಪ್ರದೇಶಗಳಲ್ಲಿ ಭೂ ಸವೆತಕ್ಕೆ ಕಾರಣವಾಗಿವೆ. ಹಲವಾರು ಸ್ಥಳಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಪರಿಣಾಮವಾಗಿ, ಬರಾಕ್ ಕಣಿವೆ ಮತ್ತು ಬ್ರಹ್ಮಪುತ್ರ ಕಣಿವೆಯ ನಡುವಿನ ರಸ್ತೆ ಸಂಪರ್ಕವು ಅಸ್ತವ್ಯಸ್ತವಾಗಿದೆ.

ಇದರ ಪರಿಣಾಮ ತಯಾರಿಸಿದ ಚಹಾಗಳ ರವಾನೆಯ ಮೇಲೆ ತೀವ್ರ ಪ್ರಭಾವ ಬೀರಿದೆ. ಆ ಪ್ರದೇಶದ ಪ್ರಮುಖ ಪಟ್ಟಣಗಳಿಂದ ಹಲವಾರು ಟೀ ಎಸ್ಟೇಟ್‌ಗಳಿಗೆ ರಸ್ತೆ ಸಂಪರ್ಕದ ಅಡಚಣೆಯು ಪರಿಣಾಮ ಬೀರಿದೆ ಎಂದು ಐಟಿಎ(ITI) ಹೇಳಿದೆ. ಈ ಹವಾಮಾನ ಬದಲಾವಣೆಯಿಂದಾಗಿ ವಿದ್ಯುತ್ ಅಡಚಣೆ ಮತ್ತು ದೂರಸಂಪರ್ಕದಲ್ಲಿ ಅಸ್ಥಿರತೆ ಉಂಟಾಗಿದೆ. ಇದರೊಂದಿಗೆ ಕಲ್ಲಿದ್ದಲು(Coal) ಮುಂತಾದ ಅಗತ್ಯ ವಸ್ತುಗಳ ಕೊರತೆಯ ಬಗ್ಗೆ ಹೆಚ್ಚಿನ ಆತಂಕವಿದೆ ಎಂದು ಐಟಿಎ ಹೇಳಿದೆ. ಈಗಾಗಲೇ ಚಹಾ ಉತ್ಪಾದನೆಯ ಮಟ್ಟ 27% ನಷ್ಟು ಕುಸಿದಿದ್ದು,
ಇದೇ ರೀತಿಯ ವಾತಾವರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಹಾ ಉತ್ಪಾದನೆಯು ಇನ್ನಷ್ಟು ಕುಸಿತಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಚಹಾ ಸಂಘ ತಿಳಿಸಿದೆ.