ಮುಂಬೈ, ಜೂ. 03: ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಜೊತೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಟೀಂ ಇಂಡಿಯಾ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಹಾಗೂ ಸಹ ಸಿಬ್ಬಂದಿ ಬುಧವಾರ ರಾತ್ರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಆಟಗಾರರು ಹಾಗೂ ಸಹ ಸಿಬ್ಬಂದಿ ಇಂದು ಲಂಡನ್ ತಲುಪಲಿದ್ದು, ನಂತರ ಸೌತ್ ಹ್ಯಾಂಪ್ಟನ್ನಲ್ಲಿ ಐಸೋಲೇಷನ್ ನಲ್ಲಿ ಇರಲಿದ್ದಾರೆ. ಆಟಗಾರರು ಸಹ ಸಿಬ್ಬಂದಿ ಜೊತೆಗೆ ಹಲವು ಆಟಗಾರರ ಕುಟುಂಬ ಸದಸ್ಯರು ಸಹ ಟೀಂ ಇಂಡಿಯಾ ಜೊತೆಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಆಟಗಾರರ ಐಸೋಲೇಷನ್ ಸಮಯವನ್ನು ಹೆಚ್ಚಿಸುವ ನಿಟ್ಟನಲ್ಲಿ ಐಸಿಸಿ ಚಿಂತನೆ ನಡೆಸಿದ್ದು, ಕ್ವಾರಂಟೈನ್ ಅವಧಿಯಲ್ಲಿ ಕೊರೊನಾ ಟೆಸ್ಟ್ ಸಹ ನಡೆಸಲಾಗುತ್ತದೆ.

ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳ ಪೈಕಿ ವಿರಾಟ್ ಕೊಹ್ಲಿ ಸಾರಥ್ಯದ ಪುರುಷರ ತಂಡ ಇಂಗ್ಲೆಂಡ್ ನಲ್ಲಿ 6 ಟೆಸ್ಟ್ ಪಂದ್ಯಗಳನ್ನು ಆಡಲಿದ್ದರೆ. ಮಹಿಳಾ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದ್ದಾರೆ.
ಟೀಂ ಇಂಡಿಯಾ ಪುರುಷರ ತಂಡ ಜೂನ್ ನಿಂದ ಸೆಪ್ಟೆಂಬರ್ ವರೆಗೆ UK ಅಲ್ಲಿ ವಾಸ್ತವ್ಯ ಹೂಡಲಿದ್ದು, ಜೂನ್ 18ರಿಂದ ನ್ಯೂಜಿ಼ಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಸೇರಿದಂತೆ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದಲ್ಲಿ ಮುನ್ನಡೆಯುವ ಭಾರತ ಮಹಿಳಾ ತಂಡ 3 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಿ ಭಾಗವಹಿಸಲಿದೆ.
