ಬೆಂಗಳೂರು, ಮೇ. 13: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ಕೊರೊನಾ ಲಸಿಕೆ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ 18ರಿಂದ 44 ವರ್ಷ ವಯೋಮಾನದವರಿಗೆ ಕೋವಿಡ್-19 ಲಸಿಕೆ ನೀಡುವುದನ್ನು ನಾಳೆಯಿಂದ (ಮೇ 14) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಿಗೆ ಈ ಆದೇಶ ಅನ್ವಯವಾಗಲಿದ್ದು, 18-44 ವಯೋಮಾನದವರಿಗೆ ನೀಡಲು ಖರೀದಿಸಿರುವ ಲಸಿಕೆಯನ್ನು ಎರಡನೇ ಡೋಸ್ ಪಡೆಯಲಿರುವವರಿಗೆ ಬಳಸಲಾಗುವುದುʼ ಎಂದು ಸರ್ಕಾರ ಹೇಳಿದೆ.
ಕೇಂದ್ರದಿಂದ ಸರಬರಾಜಾಗುತ್ತಿರುವ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲು ಸಂಪೂರ್ಣವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಆ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿರುವವರೂ ಸೇರಿದಂತೆ 18-44 ವಯೋಮಾನದವರಿಗೆ ಮೇ 14ರಿಂದ ಲಸಿಕೆ ನೀಡುವುದನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.