ಓಸ್ಲೋ ಅ 16 : ಬಿಲ್ಲು ಮತ್ತು ಬಾಣಗಳನ್ನು ಹಿಡಿದುಕೊಂಡಿದ್ದ ಹಂತಕನೊಬ್ಬ ನಿರಂತರ ಬಾಣಗಳ ದಾಳಿ ನಡೆಸಿ ಐವರನ್ನು ಹತ್ಯೆ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆ ಆಗ್ನೇಯ ನಾರ್ವೆಯ ಕೊಂಗ್ಸ್‌ಬರ್ಗ್ ಎಂಬ ಪಟ್ಟಣದಲ್ಲಿ ಬುಧವಾರ ನಡೆದಿದೆ. ಶಂಕಿತ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯಕ್ತಿ ಬಾಣದಿಂದ ದಾಳಿ ನಡೆಸಲು ಶುರು ಮಾಡಿದ ಬಳಿಕ ಕೆಲವರಂತೂ ತಮ್ಮ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಮಹಿಳೆಯೊಬ್ಬರು ತಮ್ಮ ಮಗುವನ್ನು ಎತ್ತಿಕೊಂಡೇ ಎದ್ದು-ಬಿದ್ದು ಓಡಿದ್ದಾರೆ ಎಂದು ಘಟನೆಯನ್ನು ಹತ್ತಿರದಿಂದ ನೋಡಿದವರು ವಿವರಿಸಿದ್ದಾರೆ. ಸದ್ಯಕ್ಕಂತೂ ಕಾಂಗ್ಸ್ಬರ್ಗ್ನಲ್ಲಿ ಪೊಲೀಸ್ ಬಿಗಿ ಭದ್ರತೆಯಿದೆ. ಜನರು ಆದಷ್ಟು ಮನೆಯಲ್ಲೇ ಇರಿ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಘಟನೆ ನಡೆದ ಜಾಗದಲ್ಲಿ ಆ್ಯಂಬುಲೆನ್ಸ್, ಪೊಲೀಸ್ ವಾಹನಗಳು, ಹೆಲಿಕಾಪ್ಟರ್ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಬೀಡು ಬಿಟ್ಟಿದೆ.
ಕೊಂಗ್ಸ್‌ಬರ್ಗ್ ಪಟ್ಟಣದ ಅನೇಕ ಸ್ಥಳಗಳಲ್ಲಿ ಆತ ದಾಳಿ ನಡೆಸಿದ್ದು, ಈ ಸರಣಿ ಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.ಘಟನೆಯ ಸ್ವರೂಪವನ್ನು ಗಮನಿಸಿದರೆ ಇದು ಭಯೋತ್ಪಾದನಾ ಕೃತ್ಯದಂತೆ ಕಂಡುಬಂದಿದೆ. ಶಂಕಿತ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಒಯ್ವಿಂಡ್ ಆಸ್ ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೂಡ ಸೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಆತನೊಬ್ಬನೇ ಈ ದಾಳಿಗಳನ್ನು ನಡೆಸಿದ್ದಾನೆ. ನಡೆದಿರುವ ಘಟನೆಗ ಸ್ವರೂಪವನ್ನು ಗಮನಿಸಿದರೆ ಇದು ಭಯೋತ್ಪಾದನಾ ಕೃತ್ಯವೇ ಆಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.