ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿಯಲ್ಲಿ ಶಿವಖೋರಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಬುಲೆಟ್ ಬಸ್ ಚಾಲಕನಿಗೆ ತಾಗಿ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿದೆ.ಇನ್ನು ಈ ದುರ್ಘಟನೆಯಲ್ಲಿ 10 ಭಕ್ತಾದಿಗಳು ಸಾವನ್ನಪ್ಪಿದ್ದು, 33ಕ್ಕೂ ಹೆಚ್ಚು ಯಾತ್ರಿಕರು ಗಾಯಗೊಂಡಿದ್ದಾರೆ. ಶಿವಖೋರಿ ದೇವಸ್ಥಾನಕ್ಕೆ (Shivakhori Temple) ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪೋನಿ ಪ್ರದೇಶದ ತೆರಯತ್ ಗ್ರಾಮದಲ್ಲಿ ತೆರಳುತ್ತಿದ್ದಂತೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಂದೆಡೆ ರಾಷ್ಟ್ರಪತಿ ಭವನದಲ್ಲಿ ನಿನ್ನೆ ಸಾಯಂಕಾಲ ನರೇಂದ್ರ ಮೋದಿ (Narendra Modi) ಹಾಗೂ ಸಚಿವರುಗಳು ಪ್ರಮಾಣವಚನ ಸ್ವೀಕರಿಸುತ್ತಿದ್ದರೆ ಇನ್ನೊಂದೆಡೆ ಕಣಿವೆ ರಾಜ್ಯದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರೀತಿಯ ದಾಳಿ ಇದೇ ಮೊದಲ ಬಾರಿ ಏನಲ್ಲ ಆದರೂ ಏನೂ ಅರಿಯದ ಶಿವ ಭಕ್ತರ ಮೇಲೆ ಉಗ್ರರು ಸುಮಾರು 30ರಿಂದ 40 ಸುತ್ತು ಗುಂಡು ಹಾರಿಸಿ ದಾಳಿ ಮಾಡಿರುವುದು ಇದೇ ಮೊದಲು.
ನಿನ್ನೆ ಭಯೋತ್ಪಾದಕರು ಬಸ್ ಮೇಲೆ ದಾಳಿ ಮಾಡಿದ ನಂತರ ಭಾರತೀಯ ಸೇನೆಯು ರಿಯಾಸಿಯಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಉಗ್ರರು ಪಾಕಿಸ್ತಾನ (Pakistan) ಮೂಲದವರಾಗಿದ್ದಾರೆ ಎಂಬುದು ಈಗಾಗಲೇ ತಿಳಿದುಬಂದಿದೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಕೂಡ ಸ್ಥಳಕ್ಕೆ ಆಗಮಿಸಿದೆ. ಇನ್ನು ರಿಯಾಸಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗಾಯಗೊಂಡಿದ್ದ 33 ನಾರಾಯಣ ಆಸ್ಪತ್ರೆ (Narayana Hospital) ಮತ್ತು ರಿಯಾಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾತ್ರಿಕರ ಮೇಲೆ ಉಗ್ರರ ದಾಳಿಯನ್ನು ಪ್ರಧಾನಿ ಮೋದಿ, ಅಮಿತ್ ಷಾ (Modi, Amit Shah) ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ನಡೆದ ಭಯೋತ್ಪಾದಕರ ದಾಳಿಯಿಂದ ನಾನು ದುಃಖಿತನಾಗಿದ್ದೇನೆ. ಈ ಕ್ರೂರ ಕೃತ್ಯವು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಮತ್ತು ಇದನ್ನು ಖಂಡಿಸುತ್ತೇವೆ. ಸಂತ್ರಸ್ತರ ಕುಟುಂಬಗಳೊಂದಿಗೆ ರಾಷ್ಟ್ರ ನಿಂತಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದ್ರೌಪದಿ ಮುರ್ಮು (Draupadi Murmu) ಹೇಳಿದ್ದಾರೆ.