ನವದೆಹಲಿ, ಜೂ. 15: ಕೋವಿಡ್ ಲಸಿಕೆ ವಿತರಣೆ ದೇಶದಲ್ಲಿ ಆರಂಭಿಸಿದ ಬಳಿಕ ಲಸಿಕೆ ಪಡೆದ ಅನೇಕ ಮಂದಿ ವಿವಿಧ ಕಾರಣಗಳಿಂದ ಸಾವನ್ನಪ್ಪಿದರು. ಅಲ್ಲದೇ, ಲಸಿಕೆ ಪಡೆದ ಕಾರಣದಿಂದಲೇ ಕೆಲವರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಆದರೆ, ಸರ್ಕಾರ ಮಾತ್ರ ಅವರ ಸಾವಿಗೆ ಲಸಿಕೆಯೇ ಕಾರಣ ಎಂಬ ವಾದವನ್ನು ತಳ್ಳಿ ಹಾಕಿತ್ತು. ಅಲ್ಲದೇ, ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂಬ ಬಗ್ಗೆ ಭರವಸೆ ಕೂಡ ನೀಡಿತ್ತು. ಇದರ ಜೊತೆ ಲಸಿಕೆಯ ಪರಿಣಾಮಕಾರಿತ್ವ ಹಾಗೂ ಅಡ್ಡ ಪರಿಣಾಮದ ಕುರಿತು ಪರೀಕ್ಷೆ ನಡೆಸಲು ಮುಂದಾಗಿತ್ತು. ಈ ಬಗ್ಗೆ ಅಧ್ಯಯನ ನಡೆಸಿದ ಸರ್ಕಾರದ ಸಮಿತಿ, ಇದೇ ಮೊದಲ ಬಾರಿಗೆ ಲಸಿಕೆಯ ಪರಿಣಾಮದಿಂದ 68 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಒಪ್ಪಿಕೊಂಡಿದೆ.
ಕೋವಿಡ್ ಲಸಿಕೆ ಪಡೆದ ಬಳಿಕ ದೇಶದಲ್ಲಿ ಇದುವರೆಗೂ ಸಾವನ್ನಪ್ಪಿದವರು ಕೇವಲ ಒಬ್ಬ ವ್ಯಕ್ತಿ ಮಾತ್ರ ಎಂದು ಸರ್ಕಾರದ ಸಮಿತಿ ದೃಢಪಡಿಸಿದೆ. ಲಸಿಕೆ ಅಡ್ಡಪರಿಣಾಮ ಕುರಿತು ಅಧ್ಯಯನ ನಡೆಸಿದ ಸರ್ಕಾರದ ಸಮಿತಿ ಈ ವರದಿ ಬಹಿರಂಗ ಪಡಿಸಿದೆ. ಲಸಿಕೆ ಪಡೆದ ಬಳಿಕ ಉಂಟಾಗುವ ಅಲರ್ಜಿಯಿಂದಾಗಿ 68 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ ಕಾರಣವೇ ಇವರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟ ಪಡಿಸಿದೆ. ಮಾರ್ಚ್ 8 ರಂದು ಇವರು ಲಸಿಕೆ ಪಡೆದಿದ್ದ ಇವರು ಮಾರ್ಚ್ 31ರಂದು ಸಾವನ್ನಪ್ಪಿದರು ಎಂದು ಸಮಿತಿ ತಿಳಿಸಿದೆ. ಲಸಿಕೆ ಪ್ರತಿಕೂಲ ಪರಿಣಾಮ ಕುರಿತು ಎಇಎಫ್ಐ ಸಮಿತಿ ಅಧ್ಯಯನ ನಡೆಸಿತು. ಈ ಸಮಿತಿಯಲ್ಲಿ ಕೋವಿಡ್ ಲಸಿಕೆ ಪಡೆದ ಬಳಿಕ ಗಂಭೀರ ಪರಿಣಾಮ ಬೀರಿದ 31 ಪ್ರಕರಣಗಳನ್ನು ಅಧ್ಯಯನ ನಡೆಸಲಾಯಿತು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅನಾಫಿಲ್ಯಾಕ್ಸಿಸ್ನಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದು ದೃಢವಾಗಿದೆ.
ಈ ಕುರಿತು ಮಾತನಾಡಿರುವ ಎಇಎಫ್ಐ ಮುಖ್ಯಸ್ಥ ಡಾ. ಎನ್ಕೆ ಆರೋರಾ, 68 ವರ್ಷದ ವ್ಯಕ್ತಿ ಸಾವಿಗೆ ಕೋವಿಡ್ ಲಸಿಕೆಯೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ಕುರಿತು ಯಾವುದೇ ಹೇಳಿಕೆ ನೀಡಲು ಅವರು ನಿರಾಕರಿಸಿದ್ದಾರೆ.
68 ವರ್ಷದ ವ್ಯಕ್ತಿ 8 ಮಾರ್ಚ್ 2021ರಂದು ಕೋವಿಡ್ ಲಸಿಕೆ ಪಡೆದಿದ್ದರು. ಈ ವೇಳೆ ಅವರು ಅನಾಫಿಲ್ಯಾಕ್ಸಿಸ್ ನಿಂದಾಗಿ ಅಂದರೆ, ಅಲರ್ಜಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. ಉಳಿದ ಪ್ರಕರಣ ಸೇರಿದಂತೆ ಸಂಪೂರ್ಣ ತನಿಖೆಯ ನಂತರ ಕೂಡ ಲಸಿಕೆ ಪರಿಣಾಮವಾಗಿ ಸಾವನ್ನಪ್ಪಿದವರು ಒಬ್ಬರೇ ಎಂಬುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಸಿಎನ್ಎನ್ ನ್ಯೂಸ್ 18ಗೆ ತಿಳಿಸಿದ್ದಾರೆ.
ಇನ್ನು ಉಳಿದ 31 ಸಾವಿನಲ್ಲಿ 18 ಮಂದಿ ಸಾವು ಲಸಿಕೆಯೊಂದಿಗೆ ಯಾವುದೇ ಸಂಬಂದ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಲಸಿಕೆ ಅವರ ಸಾವಿಗೆ ಕಾಕತಾಳಿಯವಾಗಿದೆ. ಅವರ ಸಾವಿಗೆ ಇತರೆ ಕಾರಣ ಇದ್ದು, ಇದು ವಾಕ್ಸಿನೇಷನ್ನಿಂದ ಸಂಭವಿಸಿಲ್ಲ. ಇನ್ನು ಏಳು ಸಾವುಗಳನ್ನು ಅನಿರ್ಧಿಷ್ಟ ಎಂದು ವರ್ಗೀಕರಿಸಲಾಗಿದ್ದು, ಇನ್ನುಳಿದ ಎರಡು ಪ್ರಕರಣವನ್ನು ವರ್ಗೀಕರಣ ಮಾಡಿಲ್ಲ. ಈ ವರ್ಗೀಕರಿಸಲಾಗದ ಸಾವಿನ ತನಿಖೆ ಮಾಡಲಾಗಿದೆ. ಆದರೂ ಈ ಸಾವಿಗೆ ನಿರ್ಣಾಯಕ ಮಾಹಿತಿ ಸಿಕ್ಕಿಲ್ಲ.
ಲಸಿಕೆ ಪಡೆದ ಬಳಿಕ ಉಂಟಾಗುವ ಅಡ್ಡ ಪರಿಣಾಮಗಳಿಂದ ಸಾವನ್ನಪ್ಪುವವರ ಸಂಖ್ಯೆ 0.01ಕ್ಕಿಂತ ಕಡಿಮೆಯೇ ಎಂದು ಕೂಡ ಸಮಿತಿ ತಿಳಿಸಿದೆ. ಲಸಿಕೆ ಮೊದಲ ವಿತರಣೆ ಆರಂಭವಾದಾಗಿನಿಂದ ಅಂದರೆ ಜೂನ್ 16ರಿಂದ ಜೂನ್ 7ರವರೆಗೆ ಅಂಕಿ ಅಂಶಗಳ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯದ ಎಇಎಫ್ಐ ಈ ವರದಿ ತಯಾರಿಸಿದೆ.