ಮೈಸೂರು, ಜು. 07: ಪಕ್ಷಾಂತರಿಗಳನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿಕವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಜಟಾಪಟಿ ಮುಂದುವರಿದಿದೆ.
ಪಕ್ಷಕ್ಕೆ ಬರಲು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇತ್ತೀಚೆಗಷ್ಟೇ ಹೇಳಿದ್ದರು. ಈ ಹೇಳಿಕೆಗೆ ತದ್ವಿರುದ್ಧವಾಗಿ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷ ವಿರೋಧಿಗಳನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎನ್ನುವ ಮೂಲಕ ಕಾಂಗ್ರೆಸ್ ಅಧ್ಯಕ್ಷರಿಗೆ ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ತೊರೆದು ಇಂದು ಕೆಲವರು ಕಾಂಗ್ರೆಸ್ ಪಕ್ಷಕ್ಕೆ ನಗರದಲ್ಲಿ ಸೇರ್ಪಡೆಗೊಳ್ಳುತ್ತಿದ್ದು, ಅವರನ್ನ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಪಕ್ಷಕ್ಕೆ ಯಾರೇ ಸೇರ್ಪಡೆಗೊಳ್ಳಲು ನಮ್ಮ ತಕರಾರು ಇಲ್ಲ. ಆದರೆ, ಪಕ್ಷಕ್ಕೆ ದ್ರೋಹ ಮಾಡುವವರನ್ನು ಸೇರಿಸಿಕೊಳ್ಳಬಾರದು ಎಂದು ಹೇಳಿದರು.
ಅದೇ ರೀತಿ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಲ್ಲದವರನ್ನು ಹಾಗೂ ಅಧಿಕಾರದ ಆಸೆಗೋಸ್ಕರ ಬರುವವರನ್ನು ಸಹ ಪಕ್ಷಕ್ಕೆ ಸೇರಿಸಿಕೊಳ‍್ಳಬಾರದು. ಅಧಿಕಾರನೇ ಮುಖ್ಯ ಅನ್ನುವುದು ಸರಿಯಲ್ಲ. ಅಧಿಕಾರ ಸಿಕ್ಕಾಗ ಪಡೆಯಬೇಕು ಎಂದರು.