ನವದೆಹಲಿ, ಜೂ. 08: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನಿ ಸೋಮವಾರ ಘೋಷಿಸಿದ್ದಾರೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಭಾರತ ಲಸಿಕೆಗಳ ಮೇಲಿನ ವೆಚ್ಚ ₹45 ಸಾವಿರ ಕೋಟಿಯಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡಲಾಗುವ ಲಸಿಕೆಗೆ ರಾಜ್ಯ ಸರ್ಕಾರಗಳೇ ಹಣ ಪಾವತಿಸಬೇಕು ಎಂಬ ಕೇಂದ್ರದ ನೀತಿಯು ವ್ಯಾಪಕವಾಗಿ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಎಲ್ಲ ವಯಸ್ಕರಿಗೆ ನೀಡಲಾಗುವ ಲಸಿಕೆಯ ವೆಚ್ಚವನ್ನು ಜೂನ್ 21 ರಿಂದ ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿ ಸೋಮವಾರ ಘೋಷಿಸಿದ್ದರು.
ಪ್ರಧಾನಿ ನಿರ್ಧಾರದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯ ಕುರಿತು ಸರ್ಕಾರದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 1ರಿಂದ ಆರಂಭವಾಗಿರುವ ಲಸಿಕೆ ಅಭಿಯಾನಕ್ಕೆ ಭಾರತವು ಈ ಹಣಕಾಸು ವರ್ಷದಲ್ಲಿ ₹45 ಸಾವಿರ ಕೋಟಿ ವಿನಿಯೋಗಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಸಿಕೆ ಅಭಿಯಾನಕ್ಕೆ ಭಾರತ ಸರ್ಕಾರವು ಬಜೆಟ್ನಲ್ಲಿ ₹35 ಸಾವಿರ ಕೋಟಿ ಮೀಸಲಿಟ್ಟಿತ್ತು.
ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಅಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್, ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಅನ್ನು ಭಾರತದ ಲಸಿಕೆ ಅಭಿಯಾನದಲ್ಲಿ ಬಳಸಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಈ ತಿಂಗಳು ವಾಣಿಜ್ಯಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ.