ಮುಂಬೈ, ಮಾ. 19: ದೇಶದಾದ್ಯಂತ ಕೊರೊನಾ ವೈರಸ್ ಎರಡನೇ ಅಲೆ ಭೀತಿ ಎದುರಾಗಿದ್ದು, ಅತಿ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಜ್ಜೆ ಇಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಮುಂಬೈನಲ್ಲಿ ಶಾಪಿಂಗ್ ಮಾಲ್ಗೆ ಹೋಗಲು ಕೊವಿಡ್ ವರದಿ ಕಡ್ಡಾಯಗೊಳಿಸಲಾಗಿದೆ.
ಆರ್ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಆಯಂಟಿಜೆನ್ ಟೆಸ್ಟ್ ವರದಿ ಇದ್ದರೆ ಮಾತ್ರ ಶಾಪಿಂಗ್ ಮಾಲ್ಗೆ ಪ್ರವೇಶ ನೀಡಲಾಗುತ್ತದೆ. ಈ ನಿಯಮ ಮಾರ್ಚ್ 22ರಿಂದ ಜಾರಿಯಾಗಲಿದ್ದು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಬುಧವಾರ ಒಂದೇ ದಿನ 25 ಸಾವಿರ ಕೊರೊನಾ ಕೇಸ್ಗಳು ದಾಖಲಾಗಿವೆ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಮತ್ತೆ ಲಾಕ್ಡೌನ್ ಹೇರಿಕೆ ಆಗುವ ಭೀತಿ ಕೂಡ ಕಾಡಿದೆ.