ಬೆಂಗಳೂರು, ಮಾ. 11: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ರಾತ್ರಿ ಪಾರ್ಟಿಗಳಿಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಇಂದಿನಿಂದ ರಾಜ್ಯಾದ್ಯಂತ, ಪ್ರಮುಖವಾಗಿ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ರಾತ್ರಿ ಹೊತ್ತು ಪಾರ್ಟಿಗಳನ್ನು ನಡೆಸುವುದರ ಮೇಲೆ ನಿಷೇಧ ಹೇರಿದ್ದು, ಸ್ಟಾರ್ ಹೋಟೆಲ್, ರೆಸ್ಟೊರೆಂಟ್‍ಗಳಿಗೆ ಸೂಚಿಸಿರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಪಾರ್ಟಿಗಳು ಕೊರೊನಾ ಸೋಂಕಿನ ಸೂಪರ್ ಸ್ಪ್ರೆಡರ್‍ಗಳಾಗುವ ಎಲ್ಲಾ ಸಾಧ್ಯತೆಗಳಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಆದೇಶದವರೆಗೂ ಈ ನಿಷೇಧ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ. ಮದುವೆ ಕಾರ್ಯಕ್ರಮಗಳು ಹಾಗೂ ಹೆಚ್ಚು ಜನರು ಸೇರುವ ಎಲ್ಲಾ ಕಾರ್ಯಕ್ರಮಗಳ ಮೇಲೂ ನಿಗಾ ಇಟ್ಟಿರುವುದಾಗಿ ತಿಳಿಸಿದ್ದಾರೆ.
ನೆರೆ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುವುದರಿಂದ ರಾಜ್ಯಾದ್ಯಂತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಬುಧವಾರ 760 ಹೊಸ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿಯೇ 488 ಪ್ರಕರಣಗಳು ಪತ್ತೆಯಾಗಿವೆ.
331 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಚೆಗೆ ದುಬೈನಿಂದ ಶಿವಮೊಗ್ಗಕ್ಕೆ ಮರಳಿದ್ದ ವ್ಯಕ್ತಿಯೊಬ್ಬರಲ್ಲಿಯೂ ದಕ್ಷಿಣ ಆಫ್ರಿಕಾ ಕೊರೊನಾ ರೂಪಾಂತರ ಸೋಂಕು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿರುವುದಾಗಿ ತಿಳಿದು ಬಂದಿದೆ.