ದೆಹಲಿ, ಏ. 22: ದೇಶದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ಗಂಭೀರವಾಗಿದ್ದು, ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇನ್ನೊಂದೆಡೆ ವೈದ್ಯಕೀಯ ವ್ಯವಸ್ಥೆಗಳಲ್ಲಿ ಕೊರತೆ ಕಾಣಿಸಿಕೊಳ್ಳುತ್ತಿರುವುದರಿಂದ ಪರಿಸ್ಥಿತಿ ನಿಯಂತ್ರಣ ಕೈತಪ್ಪುತ್ತಿದೆ. ಈ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯ ಕೊರೊನಾಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಮುಖ್ಯ ನ್ಯಾಯಮೂರ್ತಿ ಎಸ್.ಎ .ಬೋಬ್ಡೆ ನೇತೃತ್ವದ ಪೀಠ ಹರೀಶ್ ಸಾಳ್ವೆ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ವೋಚ್ಛ ನ್ಯಾಯಾಲಯ, ಕೊರೊನಾಕ್ಕೆ ಸಂಬಂಧಿಸಿದಂತೆ ದೆಹಲಿ, ಬಾಂಬೆ, ಸಿಕ್ಕಿಂ, ಮಧ್ಯಪ್ರದೇಶ, ಕೋಲ್ಕತ್ತಾ ಮತ್ತು ಅಲಹಾಬಾದ್ ಈ ಆರು ನ್ಯಾಯಾಲಯಗಳೂ ಉತ್ತಮವಾಗಿಯೇ ಕಾರ್ಯ ನಿರ್ವಹಿಸಿವೆ. ಆದರೆ, ಕೊರೊನಾ ನಿರ್ವಹಣೆ ಕುರಿತಾದ ವಿಚಾರಣೆಯಲ್ಲಿ ಸ್ವಲ್ಪ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಕೊರೊನಾ ನಿರ್ವಹಣೆ ವಿಚಾರದ ಬಗ್ಗೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹರೀಶ್ ಸಾಳ್ವೆ ಹಾಜರಿರಲಿದ್ದಾರೆ. ಜತೆಗೆ, ರಾಜ್ಯಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡುವ ವಿಚಾರದ ಬಗ್ಗೆ ಹಾಗೂ ಹೈಕೋರ್ಟ್‌ಗಳ ನ್ಯಾಯಾಂಗ ಅಧಿಕಾರದ ಬಗ್ಗೆ ಪರಿಶೀಲನೆ ನಡೆಯಲಿದೆ.
ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಬಹುಮುಖ್ಯವಾಗಿ ಆಕ್ಸಿಜನ್ ಪೂರೈಕೆ, ಅಗತ್ಯ ಔಷಧೀಯ ಉತ್ಪನ್ನಗಳ ಪೂರೈಕೆ, ಕೊರೊನಾ ಲಸಿಕೆ ವಿತರಣೆ ಹಾಗೂ ಲಾಕ್‌ಡೌನ್ ಮಾಡುವ ಅಧಿಕಾರದ ಬಗ್ಗೆ ವಿಚಾರಣೆ ನಡೆಯಲಿದ್ದು, ಅಮಿಕಸ್ ಕ್ಯೂರಿ ಹಾಗೂ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಆಲಿಸಲಾಗುವುದು ಎಂದು ಸುಪ್ರೀಂ ತಿಳಿಸಿದೆ.