ನವದೆಹಲಿ, ಮೇ. 28: ಕೊರೋನಾ ಹಿನ್ನೆಲೆಯಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮೇ 31ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಂ ಖಾನ್‌ವಿಲ್ಕರ್ ಮತ್ತು ಮತ್ತು ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ಪೀಠವು ‘ಈ ಅರ್ಜಿಯ ಪ್ರತಿಯನ್ನು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ (ಸಿಬಿಎಸ್‍ಇ)ಕಳುಹಿಸಲಾಗಿದೆಯೇ ಎಂದು ಅರ್ಜಿದಾರರನ್ನು ಕೋರ್ಟ್ ಪ್ರಶ್ನಿಸಿತು. ಈವರೆಗೆ ಸಿಬಿಎಸ್‍ಇಗೆ ಅರ್ಜಿಯ ಪ್ರತಿಯನ್ನು ಕಳುಹಿಸಿಲ್ಲ ಎಂದು ಅರ್ಜಿದಾರರು ತಿಳಿಸಿದರು.
ಸಿಬಿಎಸ್ಇ ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ಗೆ (ಸಿಐಎಸ್‌ಸಿಇ) ಅರ್ಜಿಯ ಪ್ರತಿಯನ್ನು ಕಳುಹಿಸುವಂತೆ ಅರ್ಜಿದಾರರಾದ ಮಮತಾ ಶರ್ಮಾ ಅವರಿಗೆ ಸೂಚಿಸಿರುವ ಪೀಠ, ಮೇ 31 ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
‘ಕೋವಿಡ್ ಸೋಂಕು ಹೆಚ್ಚುತ್ತಿದೆ. ಹಾಗಾಗಿ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ, ನಿರ್ದಿಷ್ಟ ಸಮಯದೊಳಗೆ ಫಲಿತಾಂಶವನ್ನು ಘೋಷಿಸಲು ಬೇರೆ ವಿಧಾನವನ್ನು ರೂಪಿಸುವಂತೆ ಕೇಂದ್ರ ಸರ್ಕಾರ, ಸಿಬಿಎಸ್‌ಇ, ಸಿಐಎಸ್‌ಸಿಇಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.