ಕೊಡಗು, ಏ. 18: ಆಕಸ್ಮಿಕವಾಗಿ ನೀರಿಗೆ ಬೀಳುತ್ತಿದ್ದ ಸ್ನೇಹಿತೆಯನ್ನು ರಕ್ಷಿಸಲು ಯತ್ನಿಸಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಲ್ಲಳ್ಳಿಯಲ್ಲಿ ಸಂಭವಿಸಿದೆ.
ಮೃತರನ್ನು ಸುಂಟಿಕೊಪ್ಪದ ಶಶಿಕುಮಾರ್(32) ಮತ್ತು ದಿವ್ಯ (20) ಎಂದು ಗುರುತಿಸಲಾಗಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಆರು ಜನರ ತಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಲಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ತಮ್ಮೊಂದಿಗೆ ಬಂದಿದ್ದ ದಿವ್ಯಾ ಎಂಬಾಕೆ ಆಕಸ್ಮಿಕವಾಗಿ ಜಲಪಾತದ ಕೆಳಗೆ ಬೀಳುತ್ತಿದ್ದರು. ಈ ವೇಳೆ ದಿವ್ಯಾಳನ್ನು ರಕ್ಷಿಸಲು ಹೋಗಿ ಶಶಿಕುಮಾರ್ ಸಹ ಮೃತಪಟ್ಟಿದ್ದಾರೆ.
ಅನಿರೀಕ್ಷಿತ ಸಾವಿನಿಂದ ಎರಡು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.