ಬೆಂಗಳೂರು, ಮೇ. 29: ರಾಜ್ಯ ಸರ್ಕಾರ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿ, ದುಬಾರಿ ಬೆಲೆಗೆ ಮಾರುತ್ತಿರುವ ಹಗರಣದ ಬಗ್ಗೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ಬೆಡ್ ಹಗರಣ ಬೆಳಕಿಗೆ ಬಂತು. ಬಿಜೆಪಿ ನಾಯಕರು ಒಂದು ಸಮುದಾಯವನ್ನು ಗುರಿಯಾಗಿಸಿ ಟೀಕೆ ಮಾಡಿದ್ದರು. ಆದರೆ ಈ ಹಗರಣಕ್ಕೆ ಸಂಬಂಧಿಸಿದಂತೆ ಈಗ ಬಂಧನ ಆಗಿರುವವರು ಯಾರು? ಎಂಬುದನ್ನು ಅವರೇ ಹೇಳಬೇಕು.
ಮಾಧ್ಯಮದಲ್ಲಿ ಬಂದಿರುವ ವರದಿ ಪ್ರಕಾರ, ಸರ್ಕಾರದಿಂದ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅದನ್ನು 900 ರಿಂದ 1200 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆಡಳಿತ ಪಕ್ಷದವರು ಷಾಮೀಲಾಗಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು. ಪ್ರಕರಣದ ಬಗ್ಗೆ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ರಾಜ್ಯದ ಜನರ ಪರವಾಗಿ ಮನವಿ ಮಾಡುತ್ತೇನೆ.
ಮಹಿಳಾ ಕಾಂಗ್ರೆಸ್ ಮಕ್ಕಳ ಪರ ಮುಂಜಾಗ್ರತೆಯಿಂದ ಸರ್ಕಾರಕ್ಕೆ ಸಂದೇಶ ರವಾನಿಸುತ್ತಿದ್ದಾರೆ. ನವೆಂಬರ್ 30 ರಂದು 2ನೇ ಅಲೆ ಬಗ್ಗೆ ಎಚ್ಚರಿಕೆ ಬಂದಿದ್ದರೂ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. 3ನೇ ಅಲೆ ಮಕ್ಕಳಿಗೆ ಅಪಾಯ ತರುವ ಆತಂಕ ಇರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮಕ್ಕಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮಹಿಳಾ ಘಟಕ ಕಾರ್ಯಕ್ರಮ ರೂಪಿಸಿದೆ.
ರಾಜ್ಯದ ಎಲ್ಲ ತಾಲೂಕುಗಳಲ್ಲೂ ಮಕ್ಕಳ ರಕ್ಷಣೆಗಾಗಿ ಮೆಡಿಕಲ್ ಕಿಟ್ ನೀಡುವ ಕೆಲಸ ಮಾಡುತ್ತಿದ್ದಾರೆ. ನಾನು, ಶಾಸಕಾಂಗ ಪಕ್ಷದ ನಾಯಕರು, ಕಾರ್ಯಾಧ್ಯಕ್ಷರು ಈ ಪವಿತ್ರ ಕಾರ್ಯಕ್ರಮ ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ.