ನವದೆಹಲಿ, ಮಾ. 19: ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರದಂದು ಲೋಕಸಭೆಯಲ್ಲಿ ವಾಹನಗಳ ಗುಜರಿ ನೀತಿ ಘೋಷಣೆ ಮಾಡಿದ್ದಾರೆ. ಇದು ಬಹು ನಿರೀಕ್ಷಿತವಾದ ನೀತಿಯಾಗಿದ್ದು. ಇದರ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
– ನಿಮ್ಮ ಬಳಿ ಇರುವ 15 ವರ್ಷ ಪೂರ್ಣಗೊಳಿಸಿದ ವಾಣಿಜ್ಯ (ಕಮರ್ಷಿಯಲ್) ವಾಹನಗಳಿಗೆ ಫಿಟ್ನೆಸ್ ಪ್ರಮಾಣಪತ್ರ ಇಲ್ಲ ಎಂದಾದಲ್ಲಿ ನೋಂದಣಿ ತಾನಾಗಿಯೇ ರದ್ದಾಗುತ್ತದೆ.
– ಇನ್ನು ಖಾಸಗಿ ವಾಹನಗಳ ನೋಂದಣಿ 20 ವರ್ಷಗಳ ಅವಧಿಗೆ ಆಗಿರುತ್ತದೆ. ಆ ನಂತರ ರಿನೀವಲ್ಗೆ (ನವೀಕರಣಕ್ಕೆ) ಫಿಟ್ನೆಸ್ ಪ್ರಮಾಣಪತ್ರ ಒದಗಿಸಬೇಕು.
– ನೋಂದಾಯಿತ ಕೇಂದ್ರಗಳ ಮೂಲಕವಾಗಿ ಹಳೇ ವಾಹನಗಳನ್ನು ಸ್ಕ್ರಾಪ್ ಮಾಡುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವುದಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ.
– ಗುಜರಿ ನೀತಿ ರೂಪಿಸಿರುವ ಕಾರಣ ಏನೆಂದರೆ, ಮಾಲಿನ್ಯ ಕಡಿಮೆ ಮಾಡಬಹುದು, ನೋಂದಾಯಿತ ಗುಜರಿ ಕೇಂದ್ರಗಳ ಮೂಲಕವಾಗಿ ಉದ್ಯೋಗ ಸೃಷ್ಟಿಸಬಹುದು, ಹೊಸ ವಾಹನಗಳಿಗೆ ಬೇಡಿಕೆ ಸೃಷ್ಟಿಸಬಹುದು.
– ಹೊಸ ಗುಜರಿ ನೀತಿಯ ಮೂಲಕವಾಗಿ 10,000 ಕೋಟಿ ರೂಪಾಯಿ ಹೊಸ ಬಂಡವಾಳ ಹರಿದು ಬರುವ ಹಾಗೂ 35000 ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ.
– ಗುಜರಿ ಕೇಂದ್ರಗಳಿಂದ ಹಳೇ ವಾಹನಗಳಿಗೆ ಗುಜರಿ ಮೌಲ್ಯದ ಲೆಕ್ಕಾಚಾರದಲ್ಲಿ ಪ್ರೋತ್ಸಾಹಧನ ಎಂದು ನೀಡಲಾಗುತ್ತದೆ. ಅದು ಹೊಸ ವಾಹನದ ಬೆಲೆಯ ಶೇಕಡಾ 4ರಿಂದ 6ರಷ್ಟಾಗಿರುತ್ತದೆ. ಇನ್ನು ರಸ್ತೆ ತೆರಿಗೆ ಮೇಲೆ ವೈಯಕ್ತಿಕ ವಾಹನಗಳಿಗೆ ಶೇಕಡಾ 25ರ ತನಕ ಹಾಗೂ ವಾಣಿಜ್ಯ ವಾಹನಗಳಿಗೆ ಶೇ 15ರಷ್ಟು ವಿನಾಯಿತಿ ಮತ್ತು ಗುಜರಿ ಪ್ರಮಾಣಪತ್ರದ ಮೇಲೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ.
– ಫಿಟ್ನೆಸ್ ಪರೀಕ್ಷೆ ಮತ್ತು ಗುಜರಿ ಕೇಂದ್ರಗಳು ಈ ವರ್ಷದ ಅಕ್ಟೋಬರ್ನಿಂದ ಜಾರಿಗೆ ಬರುತ್ತವೆ. ಪಿಎಸ್ಯು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿದ್ದಲ್ಲಿ ಕಡ್ಡಾಯ ಸ್ಕ್ರಾಪಿಂಗ್ ಏಪ್ರಿಲ್ 1, 2022ರಿಂದ ಜಾರಿಯಾಗುತ್ತದೆ. ಇನ್ನು ಭಾರೀ ವಾಣಿಜ್ಯ ವಾಹನಗಳಿಗೆ ಏಪ್ರಿಲ್ 1, 2023ರಿಂದ ಹಾಗೂ ಇತರ ವಾಹನಗಳಿಗೆ ಏಪ್ರಿಲ್ 1, 2024ರಿಂದ ಫಿಟ್ನೆಸ್ ಪರೀಕ್ಷೆ ಕಡ್ಡಾಯವಾಗುತ್ತದೆ. ಇದರ ಜತೆಗೆ ಹಳೇ ವಾಹನಗಳಿಗೆ ಫಿಟ್ನೆಸ್ ಪ್ರಮಾಣಪತ್ರ ಪಡೆಯುವುದಕ್ಕೆ ಶುಲ್ಕ ಹೆಚ್ಚಿಸುವ ಪ್ರಸ್ತಾವ ಕೂಡ ಮಾಡಲಾಗಿದೆ.