ಆರ್.ಎಸ್.ಎಸ್(RSS) ಕಂಡರೆ ನನಗೆ ಭಯ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ(Sadanadagowda)ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ.
ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರ್ಎಸ್ಎಸ್ ಕಂಡರೆ ಭಯ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ತಮ್ಮ ಮಕ್ಕಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ ಸಮುದಾಯದ ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರ್ಎಸ್ಎಸ್ ಬಗ್ಗೆ ಭಯ ಸಹಜ ಅಲ್ಲವೇ ಮೀಸಲಾತಿ,
ಭೂಸುಧಾರಣೆಯಂತಹ ಬಹುಸಂಖ್ಯೆಯ ಹಿಂದೂಗಳೇ ಫಲಾನುಭವಿಗಳಾಗಿರುವ ಸಾಮಾಜಿಕ ನ್ಯಾಯದ ಕಾನೂನುಗಳನ್ನೇ ವಿರೋಧಿಸುವ ಆರ್ಎಸ್ಎಸ್ ಬಗ್ಗೆ ಭಯವಲ್ಲದೆ ಪ್ರೀತಿ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ಈ ಸಮುದಾಯಗಳಂತೆ ನನಗೂ ಆರ್ಎಸ್ಎಸ್ ಬಗ್ಗೆ ಭಯ ಇದೆ.
ಆರ್.ಎಸ್.ಎಸ್ ಬಗೆಗಿನ ಭಯದ ಕಾರಣದಿಂದಾಗಿಯೇ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಆರ್ಎಸ್ಎಸ್ ಮೇಲೆ ದೇಶದ ಮೊದಲ ಗೃಹಸಚಿವ ವಲ್ಲಭಭಾಯಿ ಪಟೇಲ್ ಅವರು ನಿಷೇಧ ಹೇರಿದ್ದು ಎನ್ನುವುದು ನೆನಪಿರಲಿ. ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು(Terrorists) ಎನ್ನಲಾಗುತ್ತಿದೆ. ಸದಾನಂದಗೌಡ ಅವರು ಯಾಕೆ ತನ್ನ ಮಾತೃ ಸಂಸ್ಥೆಯ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು ಎಂದಿದ್ದಾರೆ.