Visit Channel

ರಾಜ್ಯದಲ್ಲಿ ಸಿಎಂ ಬದಲಾವಣೆಯಿಲ್ಲ ಹೈಕಮಾಂಡ್‌ ಸೂಚನೆ

cm-bs-yediyurappa-1

ನವದೆಹಲಿ, ಜೂ. 10: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹಲವು ದಿನಗಳಿಂದ ತಾರಕಕ್ಕೇರಿರುವ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಯಡಿಯೂರಪ್ಪನವರ ವಿರೋಧಿ ಬಣದವರು ನಾಯಕತ್ವ ಬದಲಾವಣೆಗೆ ಸಹಿ ಸಂಗ್ರಹವನ್ನೂ ಮಾಡಿದ್ದರು. ಇದರ ಮಧ್ಯೆ ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದು ಪಕ್ಕಾ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಆ ಎಲ್ಲ ವದಂತಿಗಳಿಗೆ ತೆರೆ ಎಳೆದಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಇಲ್ಲ ಎಂದು ಖಚಿತ ಪಡಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾರೂ ಕೂಡ ಬಹಿರಂಗವಾಗಿ ಮಾತನಾಡಬಾರದು. ಜೂನ್ 16 ಅಥವಾ 17ರಿಂದ 3 ದಿನ ನಾನು ಕರ್ನಾಟಕ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ದೆಹಲಿಯಲ್ಲಿ ಯಡಿಯೂರಪ್ಪ ಪರವಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬ್ಯಾಟಿಂಗ್ ಮಾಡಿದ್ದಾರೆ.

ಯಡಿಯೂರಪ್ಪನವರ ವಿರುದ್ಧ ಯಾರೂ ಬಹಿರಂಗವಾಗಿ ಮಾತನಾಡಬಾರದು. ಹಾಗೇ, ಈ ಬಗ್ಗೆ ಯಡಿಯೂರಪ್ಪ ಕೂಡ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಬಿಜೆಪಿ ಪಕ್ಷದ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ನಾನು ರಾಜ್ಯ ಪ್ರವಾಸ ಮಾಡಿದ ಬಳಿಕ ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸುತ್ತೇನೆ ಎಂದು ದೆಹಲಿಯಲ್ಲಿ ಅರುಣ್ ಸಿಂಗ್ ಹೇಳಿದ್ದಾರೆ.

ನಾನು ಬಿಜೆಪಿ ಪಕ್ಷಕ್ಕೆ ನಿಯತ್ತಿನಿಂದ ಇದ್ದೇನೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತನಾದ ನಾನು ಯಾವಾಗ ಹೈಕಮಾಂಡ್ ಹೇಳುತ್ತದೋ ಆಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ, ಅರುಣ್ ಸಿಂಗ್ ಅವರಿಂದ ನಾಯಕತ್ವ ಬದಲಾವಣೆಯ ಬಗ್ಗೆ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ರಾಜ್ಯದ ಹಲವು ಬಿಜೆಪಿ ನಾಯಕರು ಯಡಿಯೂರಪ್ಪ ರಾಜೀನಾಮೆ ವದಂತಿಯನ್ನು ತಳ್ಳಿಹಾಕಿದ್ದರು.

2 ದಿನಗಳ ಹಿಂದೆ ತಮ್ಮ ವಿರುದ್ಧ ಕತ್ತಿ ಮಸೆಯುತ್ತಿದ್ದ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದ ಸಿಎಂ ಯಡಿಯೂರಪ್ಪ, ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ವಿನಂತಿಸುತ್ತೇನೆ ಎಂದು ಹೇಳಿದ್ದರು.

ಅದರ ಬೆನ್ನಲ್ಲೇ ಇಂದು ಅರುಣ್ ಸಿಂಗ್ ಅವರೇ ಖುದ್ದಾಗಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ್ದ ಬಣದ ಬಾಯಿ ಮುಚ್ಚಿಸಿದ್ದಾರೆ.

2 ದಿನಗಳ ಹಿಂದಷ್ಟೇ ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹರಿಸಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರಿಂದ ಪಕ್ಷದ ಹೈಕಮಾಂಡ್ ಪ್ರತ್ಯೇಕವಾದ ವರದಿ ಕೇಳಿತ್ತು. ಭೂಪೇಂದ್ರ ಯಾದವ್ ಹಿರಿಯ ನಾಯಕರಿಂದ, ಶಾಸಕರಿಂದ ಮಾಹಿತಿ ಸಂಗ್ರಹಿಸಿದ್ದರು. ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರು ನೀಡುವ ವರದಿ ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡದಿರಲು ನಿರ್ಧರಿಸಿದೆ  ಎಂದು ಹೇಳಲಾಗುತ್ತಿದೆ.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.