ನವದೆಹಲಿ, ಆ. 2: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಒತ್ತಡ ಹೆಚ್ಚಾಗುತ್ತಿದೆ. ಆದರೆ ಏಳು ಪ್ರಮುಖ ಸಮಸ್ಯೆಗಳಿಂದಾಗಿ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿದೆ. ಕೂಡಲೇ ಸಮಸ್ಯೆ ಪರಿಹರಿಸಿ ಸಂಪುಟ ವಿಸ್ತರಣೆಗೆ ಅನುವು ಮಾಡಿಕೊಡುವಂತೆ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಆದ್ಯಕ್ಷ ಜೆ. ಪಿ. ನಡ್ಡ ಬಳಿ ಮನವಿ ಮಾಡಿದ್ದಾರೆ. ಇಂದು ಜೆ.ಪಿ. ನಡ್ಡ ಮತ್ತು ಬಸವರಾಜ ಬೊಮ್ಮಾಯಿ ಭೇಟಿ ಆಗಲಿದ್ದು ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನಲಾಗುತ್ತಿದೆ.
ಜೆ. ಪಿ. ನಡ್ಡ ಭೇಟಿ ಮಾಡಲೆಂದು ಭಾನುವಾರ ದಿಢೀರನೆ ದೆಹಲಿಗೆ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ರಾತ್ರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ನಿನ್ನೆ ನಡ್ಡಾ ಭೇಟಿ ಸಾಧ್ಯವಾಗಲಿಲ್ಲ. ಇಂದು ಬೆಳಗ್ಗೆಯೂ ಭೇಟಿಯಾಗಿಲ್ಲ. ಸಂಜೆದು ಜೆ. ಪಿ. ನಡ್ಡ ಜೊತೆ ಸಿಎಂ ಸುದೀರ್ಘವಾಗಿ ಚರ್ಚೆ ನಡೆಸಲಿದ್ದಾರೆ. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆ ತಲೆನೋವಾಗಿರುವ ಏಳು ಪ್ರಮುಖ ಕಾರಣಗಳು ಈ ರೀತಿ ಇವೆ ಎನ್ನಲಾಗುತ್ತಿದೆ:
- ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕೋ ಬೇಡವೋ?
- ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ?
- ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಂದು ಬಿಜೆಪಿ ಸರ್ಕಾರ ರಚನೆ ಆಗಲು ಕಾರಣಕರ್ತರಾದ ವಲಸೆ ಸಚಿವರ ಪೈಕಿ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೋ ಬೇಡವೋ?
- ತಮ್ಮ ರಾಸಲೀಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರುವ ಸಿಡಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ?
- ಈ ಸರ್ಕಾರಕ್ಕೆ ಇನ್ನು ಒಂದು ಮುಕ್ಕಾಲು ವರ್ಷ ಮಾತ್ರ ಬಾಕಿ ಇರುವುದರಿಂದ ಒಂದೇ ಸಲಕ್ಕೆ 30 ಜನರನ್ನು ಸಚಿವ ಸಂಪುಟ ಸೇರಿಸಿಕೊಳ್ಳಬೇಕೋ ಅಥವಾ ಕೆಲವು ಸ್ಥಾನಗಳನ್ನು ಹಾಗೆ ಇಟ್ಟುಕೊಳ್ಳಬೇಕೋ?
- ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿ ಮಾಡಬೇಕೋ ಬೇಡವೋ? ಮಾಡಿದರೆ ಎಷ್ಟು ಜನರನ್ನು ಮಾಡಬೇಕು ಮತ್ತು ಯಾವ ಮಾನದಂಡ ಅನುಸರಿಸಬೇಕು?
- ಕೆಲವು ಹಿರಿಯರನ್ನು ಸಂಪುಟದಿಂದ ಕೈಬಿಡಬೇಕಾ ಬೇಡವಾ? ಈ ವಿಷಯದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು? ಯಾರನ್ನು ಕೈಬಿಡಬೇಕು?
ಈ ಏಳು ಸಮಸ್ಯೆಗಳು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕಾಡುತ್ತಿದೆ. ಜೊತೆಗೆ ಸಚಿವಾಕಾಂಕ್ಷಿಗಳಿಂದ ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಡವೂ ಹೆಚ್ಚಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಲಾಬಿ ಮಾಡಿರುವ ಸಚಿವಾಕಾಂಕ್ಷಿಗಳು ಈಗ ದೆಹಲಿಗೂ ಬಂದಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಕೇಳಿಬಂದಿದ್ದ ಅರವಿಂದ ಬೆಲ್ಲದ್ ದೆಹಲಿಯಲ್ಲೇ ಠಿಕಾಣಿ ಹೂಡಿ ಒತ್ತಡ ಹೇರುತ್ತಿದ್ದಾರೆ. ಇದಲ್ಲದೆ ಲಕ್ಷಣ ಸವದಿ, ಸಿಸಿ ಪಾಟೀಲ್, ಸುನಿಲ್ ವಲ್ಯಾಪುರ, ರಾಜೂಗೌಡ ಮತ್ತು ಸತೀಶ್ ರೆಡ್ಡಿ ಅವರು ಕೂಡ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.