ಒಬ್ಬರ ಕಷ್ಟವನ್ನು ಅರ್ಥಮಾಡಿಕೊಂಡು ಸಹಾಯ ಮಾಡುವುದರಲ್ಲಿ ಸಿಗುವ ಸಂತೋಷ ಬೇರೆ ಎಲ್ಲೂ ಸಿಗಲಾರದು. ಕೆಲವೊಮ್ಮೆ ಒಂದೇ ಕಂಪನಿಯ ನೌಕರರೇ ಒಬ್ಬರಿಗೊಬ್ಬರು ಸಹಾಯ ಮಾಡೋದು ಕಷ್ಟ, ಸಹಾಯ ಮಾಡುವ ಸಾಮರ್ಥ್ಯವಿದ್ದರೂ ಸಹಕರಿಸಬೇಕೆಂಬ ಮನಸ್ಸಿರುವುದಿಲ್ಲ. ಆದರೆ ಇಲ್ಲಿ ಬೇರೆ ಬೇರೆ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸ್ನೇಹಿತರಾಗಿದ್ದಾರೆ. ಹೌದು, ಬಿಸಿಲಿನಲ್ಲಿ ಕಷ್ಟ ಪಟ್ಟು ಸೈಕಲ್‍ನಲ್ಲಿ(Bicycle) ಝೊಮಾಟೊ ಡೆಲಿವರಿ(Zomato Delivery) ಮಾಡುತ್ತಿದ್ದ ವ್ಯಕ್ತಿ, ತನ್ನ ಆರ್ಡರ್ ಅನ್ನು ಡೆಲಿವರಿ ಕೊಡಲು ಹೋಗುತ್ತಿದ್ದ.

ಆಗ ಅದೇ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಸ್ವಿಗ್ಗಿ(Swiggy) ಡೆಲಿವರಿ ಬಾಯ್ ಆತನಿಗೆ ಸಹಾಯ ಮಾಡಿದ್ದಾನೆ. ಕೈ ಹಿಡಿದುಕೊಂಡು ಮುನ್ನೆಡೆದಿದ್ದಾನೆ. ಇದರಿಂದ ಸೈಕಲ್‍ನಲ್ಲಿ ಹೋಗುತ್ತಿದ್ದ ಡೆಲಿವರಿ ಬಾಯ್ ಬೇಗ ಹೋಗಲು ಸಹಾಯವಾಗಿದೆ. ಈ ಮಾನವೀಯತೆಯಲ್ಲಿ ಏಕತೆ ಸಾರಿದ ಘಟನೆ ನಡೆದಿದ್ದು ದೆಹಲಿಯಲ್ಲಿ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಹಳ ವೈರಲ್(Viral) ಆಗುತ್ತಿದೆ.
ಕಾರು ಚಾಲಕರೊಬ್ಬರು ಮೊಬೈಲ್(Mobile) ಮೂಲಕ ಈ ಸ್ನೇಹದ ದೃಶ್ಯಾವಳಿಯನ್ನು ಸೆರೆಹಿಡಿದ್ದಾರೆ.
ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಬೈಕ್ನಲ್ಲಿ ಹೋಗುತ್ತಿರುವ ಸ್ವಿಗ್ಗಿ ಆಹಾರ ವಿತರಕನೊಬ್ಬ ಸೈಕಲ್ನಲ್ಲಿ ಹೋಗುತ್ತಿರುವ ಝೋಮ್ಯಾಟೋ ಆಹಾರ ವಿತರಕನ ಕೈಯನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಪ್ರತಿಸ್ಪರ್ಧಿ ಕಂಪನಿಯಾಗಿದ್ದರೂ ಕಷ್ಟಕ್ಕೆ ನೆರವಾಗುವ ಮೂಲಕ ಸ್ವಿಗ್ಗಿ ಡೆಲಿವರಿ ಬಾಯ್ ಮಾನವೀಯತೆಯನ್ನು ಮೆರೆದಿದ್ದಾರೆ. ಸನ್ನಾ ಅರೋರಾ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಜುಲೈ 9 ರಂದು ಹಂಚಿಕೊಂಡಿದ್ದು, “ದೆಹಲಿಯಲ್ಲಿ ಈ ಅತ್ಯಂತ ಬಿಸಿ ಮತ್ತು ಅಸಹನೀಯ ದಿನಗಳಲ್ಲಿ ಕಂಡ ನಿಜವಾದ ಸ್ನೇಹ” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
ಈ ವಿಡಿಯೋಗೆ ಈವರೆಗೆ 4.66 ಲಕ್ಷ ಲೈಕ್ಗಳು ಬಂದಿದ್ದು, ಸ್ನೇಹವನ್ನು ಹೊಗಳುವ ಸಾಕಷ್ಟು ಕಾಮೆಂಟ್ಗಳು ಬಂದಿವೆ. ಝೊಮಾಟೊ ಡೆಲಿವರಿ ಏಜೆಂಟ್‍ಗೆ ಸ್ವಿಗ್ಗಿ ಡೆಲಿವರಿ ವ್ಯಕ್ತಿ ಸಹಾಯ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಷ್ಟೋ ಜನ ಈ ವಿಡಿಯೋವನ್ನು ಬಹಳ ಮೆಚ್ಚಿಕೊಂಡಿದ್ದು, ತಮ್ಮ ವಾಟ್ಸಾಪ್ ಸ್ಟೇಟಸ್, ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಹಂಚಿಕೊಳ್ಳುತ್ತಿದ್ದಾರೆ.
- ಪವಿತ್ರ