ಕೋಲ್ಕತ್ತ, ಏ. 06: ಮತದಾನಕ್ಕೆ ಕಾಯ್ದಿರಿಸಿದ ಇವಿಎಂಗಳ ಜತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಮನೆಯಲ್ಲಿ ತಂಗಿದ್ದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತು ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಉತ್ತರ ಉಲುಬೆಡಿಯಾ ವಿಧಾನಸಭೆ ಕ್ಷೇತ್ರದ ಸೆಕ್ಟರ್ 17ರ ಅಧಿಕಾರಿ ತಪನ್ ಸರ್ಕಾರ್ ಅವರು ತಮ್ಮ ಸಂಬಂಧಿಕರೂ ಆಗಿರುವ ಟಿಎಂಸಿ ನಾಯಕನ ಮನೆಗೆ ಮತಯಂತ್ರಗಳ ಸಹಿತ ತೆರಳಿ ಅಲ್ಲೇ ತಂಗಿದ್ದರು. ಇದು ಚುನಾವಣಾ ಆಯೋಗದ ಸೂಚನೆಗಳ ಉಲ್ಲಂಘನೆಯಗಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಸೆಕ್ಟರ್ ಅಧಿಕಾರಿ ಜತೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ಅಮಾನತಿಗೂ ನಿರ್ದೇಶಿಸಲಾಗಿದೆ. ಅಧಿಕಾರಿ ಜತೆಗಿದ್ದ ಮತಯಂತ್ರಗಳನ್ನು ಮತ್ತು ವಿವಿಪ್ಯಾಟ್ಗಳನ್ನು ವಾಪಸ್ ಪಡೆಯಲಾಗಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವುದಿಲ್ಲ ಎಂದು ಆಯೋಗ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. 31 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 205 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 75.8 ಲಕ್ಷ ಮತದಾರರಿದ್ದಾರೆ. ಅಸ್ಸಾಂನ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂಗಳಿದ್ದ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.