ಟೋಕಿಯೋ, ಜು. 29: ಭಾರತದ ಭರವಸೆಯ ಮಹಿಳಾ ಬಾಕ್ಸರ್ ಮೇರಿ ಕೋಮ್ ಟೋಕಿಯೋ ಒಲಂಪಿಕ್ಸ್ ನ ಪ್ರೀ-ಕ್ವಾರ್ಟರ್ ಫೈನಲ್ ಕದಾಟದಲ್ಲಿ ಕೊಲಂಬಿಯಾದ ಇಂಗ್ರಿಟ್ ವಿಕ್ಟೋರಿಯಾ ವೇಲೆನ್ಸಿಯಾ ವಿರುದ್ಧ ಸೋಲನುಭವಿಸಿದ್ದು, ಆ ಮೂಲಕ ಮೇರಿ ಕೋಮ್ ಅವರ ಪದಕ ಗೆಲುವಿನ ಹೋರಾಟ ಅಂತ್ಯಗೊಂಡಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪಾಲಿಗೆ ಪದಕದ ಭರವಸೆ ಮೂಡಿಸಿದ್ದ ಮೇರಿ ಕೋಮ್, ಗುರುವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದ 16ರ ಸುತ್ತಿನ ಹೋರಾಟದಲ್ಲಿ 2-3ರಿಂದ ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ವಿರುದ್ಧ ಸೋಲು ಅನುಭವಿಸಿದರು. ಇದರೊಂದಿಗೆ ಒಲಂಪಿಕ್ಸ್ ಪದಕ ಗೆಲ್ಲಬೇಕೆಂಬ ಮೇರಿ ಕೋಮ್ ಅವರ ಕನಸು ಸಹ ಛಿದ್ರಗೊಂಡಿದೆ.
ಲಂಡನ್ ಒಲಿಂಪಿಕ್ಸ್ನಲ್ಲಿ ಈ ಹಿಂದೆ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಮೊದಲ ರೌಂಡ್ನಲ್ಲಿ 1-4ರ ಹಿನ್ನಡೆ ಅನುಭವಿಸಿದರು. ಬಳಿಕ ದಿಟ್ಟ ಹೋರಾಟ ನೀಡಿದರೂ ಯಶಸ್ಸು ಸಿಗಲಿಲ್ಲ. ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದ ಸೋಲಿನಿಂದಾಗಿ ಮೇರಿ ಕೋಮ್ ಅತ್ಯಂತ ಭಾವುಕರಾದರು.