ಟೋಕಿಯೋ, ಆ. 04: ಕೋಟ್ಯಾಂತರ ಕ್ರೀಡಾಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಒಲಿಂಪಿಕ್ಸ್ ಮಹಿಳಾ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಅರ್ಜಿಂಟೈನಾ ವಿರುದ್ಧ 1-2 ಅಂತರದಲ್ಲಿ ಸೋಲು ಕಂಡಿದೆ.
ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಕಾದಾಟ ನಡೆಸಿದವು. ಪಂದ್ಯದ ಆರಂಭದಲ್ಲೇ ಗೋಲಿನ ಖಾತೆ ತೆರೆದ ಭಾರತ ಪಂದ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ 2ನೇ ಕ್ವಾರ್ಟರ್ ನಲ್ಲಿ ಬಲಿಷ್ಠ ಕಮ್ ಬ್ಯಾಕ್ ಮಾಡಿದ ಅರ್ಜಿಂಟೈನಾ, ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ಆದರೆ ಮೂರನೇ ಕ್ವಾರ್ಟರ್ ನಲ್ಲಿ ಎರಡು ತಂಡಗಳ ನಡುವೆ ನಡೆದ ಪ್ರಬಲ ಪೈಪೋಟಿಯಲ್ಲಿ ಎರಡನೇ ಗೋಲು ಬಾರಿಸಿದ ಅರ್ಜಿಂಟೈನಾ ಪಂದ್ಯದಲ್ಲಿ 2-1ರ ಮುನ್ನಡೆ ಪಡೆಯಿತು. ಹೀಗಾಗಿ ಪಂದ್ಯದ ನಾಲ್ಕನೇ ಕ್ವಾರ್ಟರ್ ನಲ್ಲಿ ಅರ್ಜಿಂಟೈನಾ ರಕ್ಷಣಾತ್ಮಕ ಆಟವಾಡಿದ ಪರಿಣಾಮ ಭಾರತ 2-1ರ ಅಂತರದಿಂದ ಸೋಲು ಕಂಡಿತು. ಆ ಮೂಲಕ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ.
ಸದ್ಯ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿರುವ ಭಾರತ ಪುರುಷ ಹಾಗೂ ಮಹಿಳಾ ತಂಡ ಕಂಚಿನ ಪದಕಕ್ಕೆ ಸೆಣಸಾಡಲಿದೆ. ಆ.6ರಂದು ನಡೆಯುವ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಹಣಾಹಣಿ ನಡೆಸಲಿದ್ದರೆ. ಆ.5 ರಂದು ನಡೆಯವ ಪಂದ್ಯದಲ್ಲಿ ಭಾರತದ ಪುರುಷರ ತಂಡ ಜರ್ಮನಿ ವಿರುದ್ಧ ಕಾದಾಟ ನಡೆಸಲಿದೆ.