ಟೋಕಿಯೋ, ಜು. 31: ವಂದನಾ ಕಟಾರಿಯಾ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದಿಂದ ಗೆಲುವು ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ, ಟೋಕಿಯೋ ಒಲಂಪಿಕ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಕನಸು ಜೀವಂತವಾಗಿದೆ.
ಶನಿವಾರ ನಡೆದ ಗುಂಪು ಹಂತದ ಕೊನೆ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗೆ ಪ್ರಬಲ ಪೈಪೋಟಿ ನಡೆಸಿದವು. ಆದರೆ ಭಾರತದ ಪರ ಉತ್ತಮ ಆಟ ಪ್ರದರ್ಶಿಸಿದ ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲ್ ಬಾರಿಸಿದರು. ಆ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರ ಹ್ಯಾಟ್ರಿಕ್ ಗೋಲ್ ಬಾರಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.
ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ 4-3 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿದ ಭಾರತ ಮಹಿಳಾ ಹಾಕಿ ತಂಡ, ಲೀಗ್ ಹಂತದಲ್ಲಿ 6 ಅಂಕ ಪಡೆದಿದ್ದು, ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ತಂಡದ ಫಲಿತಾಂಶದ ಮೇಲೆ ಭಾರತದ ಕ್ವಾರ್ಟರ್ ಫೈನಲ್ ಕನಸು ನನಸಾಗಲಿದೆ.