ನವದೆಹಲಿ ಸೆ 9 : ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ 5 ಚಿನ್ನ ಮತ್ತು 8 ಬೆಳ್ಳಿ ಹಾಗೂ 6 ಕಂಚಿನ ಪದಕವನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಹಿನ್ನಲೆಯಲ್ಲಿ ಪದಕ ಗೆದ್ದ ಭಾರತದ ಪ್ಯಾರಾ ಅಥ್ಲೀಟ್ ಗಳನ್ನು ಕೇಂದ್ರ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಸನ್ಮಾನಿಸಿ, ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು 2016ರ ಪ್ಯಾರಾಲಿಂಪಿಕ್ಸ್ ನೆನಪಿಸಿಕೊಳ್ಳುತ್ತೇನೆ. ಆಗ ಭಾರತೀಯ ತಂಡವು 19 ಜನರನ್ನು ಒಳಗೊಂಡಿತ್ತು. ಆದರೆ ಈ ವರ್ಷ ದೇಶವು 19 ಪದಕಗಳನ್ನು ಗೆದ್ದಿದೆ. ಮಾನವ ಚೈತನ್ಯವು ಎಲ್ಲಕ್ಕಿಂತ ಶಕ್ತಿಶಾಲಿಯಾಗಿದೆ ಎಂದು ನಮಗೆ ಇದು ತೋರಿಸಿದೆ. ನಮ್ಮ ಪದಕದ ಸಂಖ್ಯೆ ಸುಮಾರು ಐದು ಪಟ್ಟು ಹೆಚ್ಚಾಗಿದೆ. ಮೊದಲ ಬಾರಿಗೆ ನಾವು ಟೇಬಲ್ ಟೆನಿಸ್‌ನಲ್ಲಿ ಪದಕಗಳನ್ನು ಗೆದ್ದಿದ್ದೇವೆ, ಇನ್ನು ಹಲವು ವಿಭಾಗಗಳಲ್ಲಿ ಪದಕಗಳನ್ನು ಗೆದ್ದಿದ್ದೇವೆ. ಇದು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಪೂರ್ತಿ ಎಂದು ತಿಳಿಸಿದರು.
ಸರ್ಕಾರವು ಭಾರತದ ಪ್ಯಾರಾಲಿಂಪಿಯನ್‌ಗಳಿಗೆ ಸೌಲಭ್ಯಗಳು ಮತ್ತು ಧನಸಹಾಯದೊಂದಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಇದರಿಂದ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠತೆಯ ಪ್ರದರ್ಶನ ನೀಡಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು ಕೇಂದ್ರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಖಾತೆ ಸಚಿವ ನಿಸಿತ್ ಪ್ರಮಾಣಿಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.