ಬೆಂಗಳೂರು, ಎ. 03: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಹೊಸ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ ಅನಿವಾರ್ಯವಾಗಿದ್ದು, ತಾಂತ್ರಿಕ ಸಲಹಾ ಸಮಿತಿಯ ಸೂಚನೆ ಮೇರೆಗೆ ಮಾರ್ಗಸೂಚಿ ಜಾರಿ ಮಾಡಲಾಗಿದೆ. ನೂತನ ಮಾರ್ಗಸೂಚಿ ಕ್ರಮಗಳು ಏಕಾಏಕಿ ಜಾರಿಗೆ ತಂದಿಲ್ಲ. ದಯವಿಟ್ಟು ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕಿದ್ದು, ಗೈಡ್ ಲೈನ್ಸ್ ಜಾರಿ ವಿಷಯದಲ್ಲಿ ರಾಜಿ ಇಲ್ಲ. ಥಿಯೇಟರ್ ರೂಲ್ಸ್ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು.
ಕಡ್ಡಾಯವಾಗಿ ಮಾರ್ಗಸೂಚಿಗಳನ್ನ ಪಾಲನೆ ಮಾಡಬೇಕು ಎಂದು ಹೇಳಿದ ಡಾ.ಕೆ.ಸುಧಾಕರ್, . ಇನ್ನೆರಡು ತಿಂಗಳು ಕೊರೋನಾ ಆರ್ಭಟ ಇರಲಿದೆ ಎಂಬುದಾಗಿ ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಇದರಿಂದಾಗಿ ಪರಿಸ್ಥಿತಿ ಕೈ ಮೀರಬಾರದೆಂದು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಏಕಾಏಕಿ ಮಾರ್ಗಸೂಚಿ ರಿಲೀಸ್ ಮಾಡಿಲ್ಲ. ಅಳೆದು ತೂಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. 8 ಜಿಲ್ಲೆಗಳ ಥಿಯೇಟರ್ ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗ ಮಾಡಿರುವ ನಿಯಮ ತಾತ್ಕಾಲಿಕ ಮಾತ್ರವಾಗಿದೆ. ಗೈಡ್ ಲೈನ್ಸ್ ಜಾರಿ ವಿಷಯದಲ್ಲಿ ರಾಜಿ ಇಲ್ಲ ಎಂದು ಸುಧಾಕರ್ ಹೇಳಿದ್ದಾರೆ.