- ಭಾರತ–ಓಮನ್ ಸ್ನೇಹಕ್ಕೆ ಆರ್ಥಿಕ ಬಲ: FTA (Trade Agreement between India-Oman) ಮೂಲಕ ಹೊಸ ಅಧ್ಯಾಯ ಆರಂಭ
- ಜವಳಿ, ಕೃಷಿ, ಔಷಧ ಸೇರಿದಂತೆ ಕಾರ್ಮಿಕ-ತೀವ್ರ ವಲಯಗಳಿಗೆ ಭಾರಿ ಲಾಭ
- ಶೇ. 98ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ಓಮನ್‌ನಲ್ಲಿ ಸುಂಕ ರದ್ದು
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮೂರು ರಾಷ್ಟ್ರಗಳ ಅಧಿಕೃತ (Trade Agreement between India-Oman) ವಿದೇಶ ಪ್ರವಾಸದ ಕೊನೆಯ ಹಂತವಾಗಿ ಓಮನ್‌ನ ರಾಜಧಾನಿ ಮಸ್ಕತ್‌ಗೆ ಭೇಟಿ ನೀಡಿದ್ದಾರೆ.
ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿ ಭಾರತ ಮತ್ತು ಓಮನ್ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement – FTA) ಸಹಿ ಹಾಕಲಾಗಿದೆ.
ಈ ಒಪ್ಪಂದವು ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕು ನೀಡುವುದರ ಜೊತೆಗೆ ಆರ್ಥಿಕ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ರೂಪದಲ್ಲಿ ಜಾರಿಗೆ ಬರಲಿರುವ ಈ ಒಡಂಬಡಿಕೆ, (Trade Agreement between India-Oman) ವ್ಯಾಪಾರ, ಹೂಡಿಕೆ ಮತ್ತು ಸೇವಾ ವಲಯಗಳಲ್ಲಿ ಪರಸ್ಪರ ಲಾಭದ ಅವಕಾಶಗಳನ್ನು ವಿಸ್ತರಿಸುವ ನಿರೀಕ್ಷೆಯಿದೆ.
ಈ ಒಪ್ಪಂದದ ಅಡಿಯಲ್ಲಿ ಭಾರತದಿಂದ ಓಮನ್‌ಗೆ ರಫ್ತು ಆಗುವ ವಸ್ತುಗಳ ಶೇ. 98ಕ್ಕೂ ಹೆಚ್ಚು ವಿಭಾಗಗಳಿಗೆ ಸಂಬಂಧಿಸಿದ ಸುಂಕಗಳನ್ನು ಓಮನ್ ಸರ್ಕಾರ ಸಂಪೂರ್ಣವಾಗಿ ತೆರವುಗೊಳಿಸಲು ಒಪ್ಪಿಕೊಂಡಿದೆ. ಇದರಿಂದಾಗಿ ಜವಳಿ, ಕೃಷಿ ಉತ್ಪನ್ನಗಳು, ಚರ್ಮದ ವಸ್ತುಗಳು, ರತ್ನಾಭರಣಗಳು, ಪಾದರಕ್ಷೆಗಳು, ಪ್ಲಾಸ್ಟಿಕ್ ಉತ್ಪನ್ನಗಳು, ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಹಲವು ಕಾರ್ಮಿಕ-ತೀವ್ರ ವಲಯಗಳಿಗೆ ದೊಡ್ಡ ಉತ್ತೇಜನ ದೊರೆಯಲಿದೆ.
ವಿಶೇಷವಾಗಿ ಶೇ. 97.96ರಷ್ಟು ಉತ್ಪನ್ನ ವರ್ಗಗಳಿಗೆ ತಕ್ಷಣವೇ ಸುಂಕ ವಿನಾಯಿತಿ ಸಿಗುವುದರಿಂದ ಭಾರತೀಯ ರಫ್ತುದಾರರಿಗೆ ಸ್ಪರ್ಧಾತ್ಮಕ ಲಾಭ ಲಭ್ಯವಾಗಲಿದೆ. ಈ ಬೆಳವಣಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಭಾರತವೂ ಸಹ ಓಮನ್‌ನಿಂದ ಆಮದು ಆಗುವ ಕೆಲವು ಪ್ರಮುಖ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ಒಪ್ಪಿದೆ.
ಖರ್ಜೂರ, ಅಮೃತಶಿಲೆ, ಪೆಟ್ರೋಕೆಮಿಕಲ್ ಉತ್ಪನ್ನಗಳು ಸೇರಿದಂತೆ ಓಮನ್‌ನ ಅಗತ್ಯ ವಸ್ತುಗಳಿಗೆ ಭಾರತ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ತೆರೆಯಲಿದೆ.
ಈ ಪರಸ್ಪರ ಸುಂಕ ಕಡಿತ ನೀತಿ, ಎರಡೂ ದೇಶಗಳ ನಡುವೆ ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ದೊರೆಯುವಂತೆ ಮಾಡಲಿದೆ.
ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಿಂದ ಈ ಒಪ್ಪಂದ ಜಾರಿಗೆ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮಸ್ಕತ್‌ನಲ್ಲಿ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಹಾಗೂ ಓಮನ್‌ನ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಪ್ರಚಾರ ಸಚಿವ ಕೈಸ್ ಬಿನ್ ಮೊಹಮ್ಮದ್ ಅಲ್ ಯೂಸೆಫ್ ಅವರು ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಒಪ್ಪಂದವು ಸೇವಾ ವಲಯದಲ್ಲಿಯೂ ಭಾರತಕ್ಕೆ ಮಹತ್ವದ ಅವಕಾಶಗಳನ್ನು ಒದಗಿಸುತ್ತದೆ. ಓಮನ್‌ನ ಪ್ರಮುಖ ಸೇವಾ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳಿಗೆ ವಾಣಿಜ್ಯ ಉಪಸ್ಥಿತಿಯ ಮೂಲಕ ಶೇ. 100ರಷ್ಟು ವಿದೇಶಿ ನೇರ ಹೂಡಿಕೆ (FDI) ಅವಕಾಶ ಕಲ್ಪಿಸಲಾಗುತ್ತಿದೆ.
ಇದರಿಂದ ಮಾಹಿತಿ ತಂತ್ರಜ್ಞಾನ, ಆರೋಗ್ಯ, ಲಾಜಿಸ್ಟಿಕ್ಸ್, ಹಣಕಾಸು ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತೀಯ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿದೆ.
ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (Africa) ಪ್ರದೇಶಗಳಿಗೆ ಪ್ರವೇಶದ ಪ್ರಮುಖ ದ್ವಾರವಾಗಿ ಓಮನ್ ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಒಪ್ಪಂದವು ಭಾರತದ ಸೇವಾ ಉದ್ಯಮಕ್ಕೆ ತಂತ್ರಾತ್ಮಕ ಮಹತ್ವವನ್ನು ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಬೆಳೆಯುವಾಗ ತನ್ನ ಸ್ನೇಹ ರಾಷ್ಟ್ರಗಳನ್ನೂ ಜೊತೆಗೇ ಬೆಳೆಯಲು ಸಹಾಯ ಮಾಡುತ್ತದೆ ಎಂಬ ನಿಲುವನ್ನು ಪುನರುಚ್ಚರಿಸಿದರು.
ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದ್ದು, ಓಮನ್‌ನಂತಹ ಆಪ್ತ ಹಾಗೂ ನಂಬಿಕೆಯ ಸ್ನೇಹಿತ ರಾಷ್ಟ್ರಗಳೊಂದಿಗೆ ಈ ಬೆಳವಣಿಗೆಯನ್ನು ಹಂಚಿಕೊಳ್ಳಲು ಬದ್ಧವಾಗಿದೆ ಎಂದು ಅವರು ಹೇಳಿದರು.
ಶತಮಾನಗಳಿಂದಲೂ ಭಾರತ–ಓಮನ್ ನಡುವೆ ಇರುವ ವ್ಯಾಪಾರಿಕ ಮತ್ತು ಸಾಂಸ್ಕೃತಿಕ ನಂಟುಗಳು ಈ ಒಪ್ಪಂದದ ಮೂಲಕ ಮತ್ತಷ್ಟು ಗಟ್ಟಿಯಾಗಲಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಪರಸ್ಪರ ಮಾರುಕಟ್ಟೆಗಳ ಅರಿವು, ತಲೆಮಾರುಗಳಿಂದ ಬಂದಿರುವ ನಂಬಿಕೆ ಮತ್ತು ಸಮುದ್ರ ನೆರೆಹೊರೆಯ ಸಂಬಂಧಗಳು ಈ ಆರ್ಥಿಕ ಸಹಕಾರಕ್ಕೆ ಬಲವಾದ ಅಡಿಪಾಯವಾಗಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ : https://vijayatimes.com/again-protests-in-bangladesh/