Vehicular traffic is restricted on this road in Bangalore for one month
Bengaluru: ಬೃಹತ್ ಬೆಂಗಳೂರು ಮಹಾನಗರ ವ್ಯಪ್ತಿಯ (BBMP) ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾವೇರಿ ಐದನೇ ಹಂತದ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಅಂತಿಮ ಹಂತ ತಲುಪಿದ್ದು, ಇತ್ತೀಚಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅದನ್ನು ಪರಿಶೀಲನೆ ನಡೆಸಿದ್ದರು.
ಇನ್ನು 110 ಹಳ್ಳಿಗಳಿಗೆ ಕುಡಿಯುವ ನೀರು ತಲುಪಿಸಲು ಉತ್ತರಹಳ್ಳಿ ರಸ್ತೆಯಲ್ಲಿ ಬಿಡಬ್ಲ್ಯೂಎಸ್ಎಸ್ಬಿ (BWSSB) ವತಿಯಿಂದ 1900 ಎಂ.ಎಂ ಡಯಾ ಪೈಪ್ ಲೈನ್‌ಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಿಂದ ಉತ್ತರಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಹೀಗಾಗಿ ಸುಗಮ ಸಂಚಾರ ದೃಷ್ಟಿಯಿಂದ ಬಿಜಿಎಸ್ ಜಂಕ್ಷನ್ (BGS Junction) ಕಡೆಯಿಂದ ಮಧು ಪೆಟ್ರೋಲ್ ಬಂಕ್ ಜಂಕ್ಷನ್ (ಪೂರ್ವದಿಂದ ಪಶ್ಚಿಮಕ್ಕೆ) ವರೆಗಿನ ರಸ್ತೆಯಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾದ್ಯಮ ಪ್ರಕಟಣೆ ಹೊರಡಿಸಿದ್ದಾರೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಕೇಳಿಕೊಂಡಿದ್ದಾರೆ.
ಇನ್ನು ಹೊಸ ಪರ್ಯಾಯ ಮಾರ್ಗವೆಂದರೆ ಬಿಜಿಎಸ್ ಜಂಕ್ಷನ್ ಕಡೆಯಿಂದ ಮಧು ಪೆಟ್ರೋಲ್ ಬಂಕ್ ಜಂಕ್ಷನ್ ಅಂದರೆ ಮೈಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಬಿಜಿಎಸ್ ಆಸ್ಪತ್ರೆ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಮೂಕಾಂಬಿಕ ಸರ್ಕಲ್ (Mukambika Circle), ವೃಷಭಾವತಿ ಮೋರಿ ಬ್ರಿಡ್ಜ್ ಮೂಲಕ ಮೈಸೂರು ರಸ್ತೆಗೆ ಪ್ರವೇಶಿಸಬಹುದಾಗಿದೆ.
ಮೈಸೂರು ರಸ್ತೆಯಿಂದ ಉತ್ತರಹಳ್ಳಿಗೆ ಹೋಗುವ ವಾಹನಗಳು ಮೈಲಸಂದ್ರ ವಿಲೇಜ್ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ವಿಲೇಜ್ ಬ್ಯಾಕ್ ಗೇಟ್ (Village Back Gate) ರಸ್ತೆ ಹಾಗೂ ಬಿಜಿಎಸ್ ಜಂಕ್ಷನ್ ಮೂಲಕ ಉತ್ತರಹಳ್ಳಿಗೆ ತಲುಪಬಹುದಾಗಿರುತ್ತದೆ. ನಗರದ ಕಡೆಯಿಂದ ಉತ್ತರಹಳ್ಳಿಗೆ ಹೋಗುವ ವಾಹನಗಳು ಮೈಲಸಂದ್ರ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಬಿಜಿಎಸ್ ಜಂಕ್ಷನ್ ಮೂಲಕ ಸಾಗಬಹುದು ಎಂದು ಬೆಂಗಳೂರು ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.