ಹೆಸರಿನಿಂದಲೇ ಕುತೂಹಲ ಮೂಡಿಸುವಂತಿರುವ ಚಿತ್ರ `ಅರಿಷಡ್ವರ್ಗ’ದ ಟ್ರೇಲರ್ ಕಳೆದ ವಾರ ಬಿಡುಗಡೆಯಾಯಿತು. ಹೇಳಿಕೇಳಿ ಇದು ಸ್ಟಾರ್ ಕಲಾವಿದರನ್ನು ಒಳಗೊಂಡಂಥ ಚಿತ್ರವಲ್ಲವಾದರೂ ಟ್ರೇಲರ್ ನೋಡಿ ಜನ ವಿಪರೀತ ಕುತೂಹಲಕ್ಕೆ ಒಳಗಾಗಿರುವುದು ನಿಜ. ಅದಕ್ಕೆ ಕಾರಣ ಥ್ರಿಲ್ಲರ್ ಮಾದರಿಯಲ್ಲಿ ಕಟ್ಟಿಕೊಟ್ಟಿರುವ ಎರಡು ಮುಕ್ಕಾಲು ನಿಮಿಷಗಳ ಚಿತ್ರಣ.
ನಿಜಕ್ಕೂ ಇದು ಒಂದು ಥ್ರಿಲ್ಲರ್ ಕತೆಯೇ ಎನ್ನುವುದನ್ನು ನವ ನಿರ್ದೇಶಕ ಅರವಿಂದ್ ಕಾಮತ್ ಹೇಳುತ್ತಾರೆ. ಕತೆ. ಚಿತ್ರಕತೆ, ಸಂಭಾಷಣೆ, ಸಂಕಲನ ಮತ್ತು ನಿರ್ದೇಶನದೊಂದಿಗೆ ಬಹುಮುಖ ಪ್ರತಿಭೆ ಪ್ರದರ್ಶಿಸಿರುವ ಇವರು ಒಬ್ಬ ರಂಗಕರ್ಮಿ ಎನ್ನುವುದು ಗಮನಾರ್ಹ. ಅದೇ ಕಾರಣದಿಂದಲೇ ಟ್ರೇಲರ್ ಬಿಡುಗಡೆ ಮಾಡಲು ಮತ್ತೋರ್ವ ಹಿರಿಯ ರಂಗಕರ್ಮಿ, ಚಿತ್ರನಟ ಪ್ರಕಾಶ್ ಬೆಳವಾಡಿ ಸಾಥ್ ನೀಡಿದ್ದರು. ಮನುಷ್ಯನ ಮನಸಿನಲ್ಲೇ ಇದ್ದು ಆತನ ಬೆಳವಣಿಗೆಯಲ್ಲಿ ತಡೆಯಾಗುವ ಆರು ವಿಚಾರಗಳನ್ನು ಅರಿಷಡ್ವರ್ಗಗಳೆನ್ನುತ್ತಾರೆ. ಚಿತ್ರದಲ್ಲಿ ಈ ಆರು ವೈರಿ ಗುಣಗಳು ಯಾರನ್ನು ಹೇಗೆ ಕಾಡುತ್ತವೆ ಎನ್ನುವುದು ಕುತೂಹಲದ ಅಂಶವೇ ನಿಜ. ಮಹತ್ವಾಕಾಂಕ್ಷೆಯುಳ್ಳ ನಟನೋರ್ವ ತನ್ನ ಗುಪ್ತವಾದ ಕಾರ್ಯಚಟುವಟಿಕೆಗಳಿಗೆ ಬಳಸುವ ಮನೆಗೆ ಹೋಗಿದ್ದಾಗ ಅಲ್ಲಿ ಆಶ್ಚರ್ಯಕರವಾದ ರೀತಿಯಲ್ಲಿ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ಆತನೊಂದಿಗೆ ಸಿನಿಮಾ ಹುಚ್ಚು ಹಿಡಿದಿರುವ ಒಬ್ಬಳು ಯುವತಿ ಮತ್ತು ಆ ರಾತ್ರಿ ಮನೆಗೆ ಕನ್ನಹಾಕಲು ಬಂದಿದ್ದ ಕಳ್ಳನೂ ಸಿಲುಕಿಕೊಳ್ಳುತ್ತಾರೆ. ಕೊಲೆಯಾದ ವ್ಯಕ್ತಿಗೂ ಇವರಿಗೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆಯುತ್ತಿರುವಂತೆ ಹೊಸ, ಹೊಸ ತಿರುವು ಪಡೆದುಕೊಳ್ಳುತ್ತಾ ಕತೆ ಸಾಗುತ್ತದೆ. ಇವಿಷ್ಟು ಚಿತ್ರದ ಬಗ್ಗೆ ತಂಡ ನೀಡಿರುವ ಮಾಹಿತಿಗಳು. ಒಟ್ಟಿನಲ್ಲಿ ಅರವಿಂದ್ ಕಾಮತ್ ಟ್ರೇಲರ್ ಮೂಲಕ ಚಿತ್ರದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಗೆದ್ದಿದ್ದಾರೆ.
“ಚಿತ್ರದಲ್ಲಿ ಅವಿನಾಶ್ ಪ್ರಧಾನ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಬಾರಿ ರಾಷ್ಟ್ರ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ನಾನು ಇದ್ದಿದ್ದರೆ ಖಂಡಿತವಾಗಿ ಅವಿನಾಶ್ ಹೆಸರನ್ನು ರಾಷ್ಟ್ರ ಪ್ರಶಸ್ತಿಗೆ ಸೂಚಿಸುತ್ತಿದ್ದೆ” ಎಂದಿದ್ದಾರೆ ಪ್ರಕಾಶ್ ಬೆಳವಾಡಿ. ನಾನು ಈಗಾಗಲೇ ಈ ಸಿನಿಮಾ ನೋಡಿದ್ದೇನೆ. ಇದು ಕನ್ನಡದಲ್ಲಿ ಹೊಸರೀತಿಯ ಜಾನರ್ ಸಿನಿಮಾ ಎನ್ನಬಹುದು. ಬಹಳ ಬೋಲ್ಡ್ ಪಾತ್ರಗಳನ್ನು ಅರವಿಂದ್ ಸೃಷ್ಟಿಸಿದ್ದಾರೆ” ಎಂದು ಅವರು ಹೇಳಿದ್ದಾರೆ. “ಎರಡು ವರ್ಷಗಳ ಹಿಂದೆಯೇ ಈ ಕತೆ ನನಗೆ ಹೇಳಿದ್ದರು. ಪ್ರಕಾಶ್ ನೀಡಿರುವ ಪ್ರಶಂಸೆಯಿಂದ ಖುಷಿಯಾಗಿದೆ” ಎಂದರು ಅವಿನಾಶ್. ಚಿತ್ರದಲ್ಲಿ ಸಂಯುಕ್ತಾ ಹೊರನಾಡು, ಅಂಜು ಆಳ್ವಾ, ನಂದಗೋಪಾಲ್, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನಬೈಲು ಮೊದಲಾದವರು ನಟಿಸಿದ್ದಾರೆ. ಇದುವರೆಗೆ ನಟರಾಗಿ ಹೆಸರು ಮಾಡಿದ್ದ ಬಾಲಾಜಿ ಮನೋಹರ್ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವುದು ವಿಶೇಷ.