ಪಾಕಿಸ್ತಾನ, ಜೂ. 07: ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಸುಮಾರು 30 ಮಂದಿ ದುರಂತ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾಚಿಯಿಂದ ಸರ್ಗೋಡಕ್ಕೆ ತೆರಳುತ್ತಿದ್ದ ಮಿಲ್ಲತ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ಈ ದುರಂತ ಸಂಭವಿಸಿದೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸರ್ ಸೈಯದ್ ಎಕ್ಸ್ಪ್ರೆಸ್ ರೈಲಿಗೆ ಮಿಲ್ಲತ್ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಿಲ್ಲತ್ ಎಕ್ಸ್ಪ್ರೆಸ್ನ ಬೋಗಿಗಳು ಉರುಳಿ ಬಿದ್ದಿವೆ. ಸರ್ ಸೈಯ್ ಎಕ್ಸ್ಪ್ರೆಸ್ ರೈಲು ಲಾಹೋರ್ನಿಂದ ಕರಾಚಿಗೆ ಹೊರಟಿತ್ತು ಎಂದು ತಿಳಿದು ಬಂದಿದೆ. ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧರ್ಕಿ ನಗರದಲ್ಲಿ ಈ ಪ್ರಮುಖ ದುರಂತ ನಡೆದಿದೆ. ಘೋಟ್ಕಿ, ಧರ್ಕಿ, ಒಬಾರೋ ಮತ್ತು ಮಿರ್ಪುರ್ ಮಥೆಲೋ ಆಸ್ಪತ್ರೆಗಳಲ್ಲಿ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿದೆ.
ಈ ಅಪಘಾತದಲ್ಲಿ ಸುಮಾರು 30 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಘೋಟ್ಕಿಯ ಜಿಲ್ಲಾಧಿಕಾರಿ ಉಸ್ಮಾನ್ ಅಬ್ದುಲ್ಲಾ ತಿಳಿಸಿದ್ದಾರೆ. ಉರುಳಿ ಬಿದ್ದ ಬೋಗಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 13 ರಿಂದ 14 ಬೋಗಿಗಳು ಹಳಿತಪ್ಪಿದ್ದು, ಅವುಗಳಲ್ಲಿ 6-8 ಬೋಗಿಗಳು ಸಂಪೂರ್ಣ ನಾಶವಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದೊಂದು ಸವಾಲಿನ ಕೆಲಸವಾಗಿದ್ದು, ಬೋಗಿಗಳ ಅಡಿಯಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಬೇಕಿದೆ. ಹೀಗಾಗಿ ಅವರನ್ನು ಹೊರತೆಗೆದು ಕಾಪಾಡಲು ತುಂಬಾ ಸಮಯ ಹಿಡಿಯುತ್ತೆ. ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಮೆಡಿಕಲ್ ಕ್ಯಾಂಪ್ಗಳನ್ನು ಆಯೋಜಿಸುತ್ತಿದ್ದೇವೆ ಎಂದರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.