ಸರ್ಕಾರದ 12.5% ವೇತನ ಹೆಚ್ಚಳ ತಿರಸ್ಕರಿಸಿದ ನೌಕರರು; ಬಸ್ ಸೇವೆ ಸ್ಥಗಿತ ಭೀತಿ
ಸರ್ಕಾರಕ್ಕೆ ಸಾರಿಗೆ ನೌಕರರ ಎಚ್ಚರಿಕೆ: ಮೇ 19ರಿಂದ ಬಸ್ ಸಂಚಾರಕ್ಕೆ ಬ್ರೇಕ್ ಸಾಧ್ಯತೆ
ವೇತನ ಹೆಚ್ಚಳಕ್ಕೆ ಅಸಮಾಧಾನಗೊಂಡ ನೌಕರರು: ಸರ್ಕಾರದ ಸಾಧನಾ ಸಮಾವೇಶದಲ್ಲೂ ಪ್ರತಿಭಟನೆಗೆ ಸಿದ್ಧತೆ
Bengalore: ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ನಡೆಯುತ್ತಿರುವ ವೇತನ ಹೆಚ್ಚಳದ ಗೊಂದಲ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಹಲವು ತಿಂಗಳಿನಿಂದ ಸಂಬಳ ಪರಿಷ್ಕರಣೆಗೆ ಒತ್ತಾಯಿಸುತ್ತಿರುವ ಸಾರಿಗೆ ನೌಕರರು ಸರ್ಕಾರ ಘೋಷಿಸಿರುವ 12.5% ವೇತನ ಏರಿಕೆಯನ್ನು ತಿರಸ್ಕರಿಸಿ ಹೋರಾಟದ ಹಾದಿ ಹಿಡಿದಿದ್ದಾರೆ.
ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿರುವ ನೌಕರರು, ಅದಕ್ಕೂ ಮುನ್ನ ಮೇ 19ರಂದು ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶದಲ್ಲೂ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. (Transport employees strike against Government)
ಈ ಬೆಳವಣಿಗೆ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ದೊಡ್ಡ ಸವಾಲಾಗುವ ಸಾಧ್ಯತೆಯಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆ 25% ವೇತನ ಹೆಚ್ಚಳವಾಗಿದ್ದು, 2024ರ ಜನವರಿಯಿಂದಲೇ ಈ ಬೇಡಿಕೆಯನ್ನು ಅವರು ಸರ್ಕಾರದ ಮುಂದೆ ಇಟ್ಟಿದ್ದರು.
ಮೊದಲಿಗೆ ಸರ್ಕಾರ ಕೇವಲ 7% ವೇತನ ಏರಿಕೆಯನ್ನು ಘೋಷಿಸಿತ್ತು. ಆದರೆ ಇದಕ್ಕೆ ನೌಕರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಬಳಿಕ ಸಾರಿಗೆ ಸಚಿವರು ಹಲವು ಸುತ್ತಿನ ಸಭೆಗಳನ್ನು ನಡೆಸಿ ನೌಕರರ ಮನವೊಲಿಸಲು ಯತ್ನಿಸಿದರೂ ಮಾತುಕತೆ ಫಲಕಾರಿಯಾಗಲಿಲ್ಲ.
ಕೊನೆಗೆ ಮುಖ್ಯಮಂತ್ರಿ ಮಟ್ಟದಲ್ಲಿಯೂ ಚರ್ಚೆ ನಡೆದ ನಂತರ, 2025ರ ಮಾರ್ಚ್‌ನಿಂದ ಅನ್ವಯವಾಗುವಂತೆ 12.5% ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊರಡಿಸಿತು.
ಆದರೂ ನೌಕರರು ತಮ್ಮ ಮೂಲ ಬೇಡಿಕೆಯಿಂದ ಹಿಂದೆ ಸರಿಯಲು ಸಿದ್ಧರಿಲ್ಲ.
ಇನ್ನು “ನಮ್ಮ ಪರಿಶ್ರಮಕ್ಕೆ ತಕ್ಕ ಸಂಬಳ ಬೇಕು” ಎಂಬ ನಿಲುವು ತೆಗೆದುಕೊಂಡಿರುವ ನೌಕರ ಸಂಘಟನೆಗಳು ಸರ್ಕಾರದ ಹೊಸ ಆದೇಶವನ್ನು ಅಪೂರ್ಣ ಎಂದು ಹೇಳುತ್ತಿವೆ.
ಕಳೆದ ಕೆಲವು ವರ್ಷಗಳಿಂದ ಜೀವನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ, ಈಗಿನ ವೇತನದಲ್ಲಿ ಬದುಕು ಸಾಗಿಸುವುದು ಕಷ್ಟಕರವಾಗಿದೆ ಎಂದು ನೌಕರರು ವಾದಿಸುತ್ತಿದ್ದಾರೆ.
ಕೇವಲ ಶೇಕಡಾವಾರು ಏರಿಕೆ ಘೋಷಣೆ ಮಾಡುವುದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. (Transport employees strike against Government)
ಸರ್ಕಾರ ನೌಕರರ ನೋವನ್ನು ಅರ್ಥಮಾಡಿಕೊಳ್ಳದೇ ಕೇವಲ ತಾತ್ಕಾಲಿಕ ಕ್ರಮ ಕೈಗೊಂಡಿದೆ ಎಂದು ಸಂಘಟನೆಗಳ ನಾಯಕರು ಆರೋಪಿಸಿದ್ದಾರೆ.
ಇದೀಗ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ ನೌಕರರು ತುಮಕೂರಿನಲ್ಲಿ ನಡೆಯಲಿರುವ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವನ್ನೇ ಗುರಿಯಾಗಿಸಿಕೊಂಡಿದ್ದಾರೆ. (Transport employees strike against Government)
ಮೇ 19ರಂದು ಟೌನ್‌ಹಾಲ್ ಬಳಿ ಕಪ್ಪು ಬಟ್ಟೆ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಸಲು ಸಿದ್ಧತೆಗಳು ನಡೆದಿವೆ.
ನೂರಾರು ಚಾಲಕರು ಮತ್ತು ನಿರ್ವಾಹಕರು ಈ ಹೋರಾಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಅಲ್ಲದೆ ಮೇ 19ರ ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರಲ್ಲಿ ಆತಂಕ ಮೂಡಿದೆ.
ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಇತರ ಸಾರಿಗೆ ನಿಗಮಗಳ ಸೇವೆಗಳು ವ್ಯತ್ಯಯಗೊಳ್ಳುವ ಭೀತಿ ಎದುರಾಗಿದೆ.(Transport employees strike against Government)
ಇನ್ನೊಂದೆಡೆ ಮುಷ್ಕರವನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳತ್ತ ಗಮನ ಹರಿಸಿದೆ. ಮುಷ್ಕರದಲ್ಲಿ ಭಾಗವಹಿಸದಂತೆ ನೌಕರರಿಗೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿ ಮಾಡುವ ಸಾಧ್ಯತೆಯೂ ಚರ್ಚೆಗೆ ಬಂದಿದೆ.
ಆದರೆ ಎಸ್ಮಾ ಜಾರಿಯಾದರೂ ನಾವು ಹಿಂದೆ ಸರಿಯುವುದಿಲ್ಲ ಎಂದು ನೌಕರ ಸಂಘಟನೆಗಳು ಸ್ಪಷ್ಟಪಡಿಸಿವೆ. “ನಮ್ಮ ಹಕ್ಕಿಗಾಗಿ ಹೋರಾಟ ಅನಿವಾರ್ಯ” ಎಂಬ ಸಂದೇಶವನ್ನು ನೌಕರರು ಸರ್ಕಾರಕ್ಕೆ ರವಾನಿಸಿದ್ದಾರೆ.
ಸರ್ಕಾರ ಮತ್ತು ನೌಕರರ ನಡುವಿನ ಈ ಸಂಘರ್ಷ ಇನ್ನೂ ಬಿಕ್ಕಟ್ಟಿನ ಹಂತ ತಲುಪುತ್ತಿರುವ ಹಿನ್ನೆಲೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಶೀಘ್ರದಲ್ಲಿ ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಇದನ್ನು ಓದಿ: https://vijayatimes.com/crypto-security-on-binance/