ಗುವಾಹಟಿ ಅ.5 ಬಿಜೆಪಿ ಮುಖಂಡ ತ್ರಿಪುರ ಶಾಸಕ ಆಶೀಶ್ ದಾಸ್, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತವಾಗಿ ತಲೆ ಬೋಳಿಸಿಕೊಂಡು ವಿನೂತನ ರೀತಿಯಲ್ಲಿ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ . ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.
ಬಿಜೆಪಿ ರಾಜಕೀಯ ಅರಾಜಕತೆ ಮತ್ತು ಅಶಾಂತಿಯನ್ನು ಹರಡಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಅವರು, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಲ್ಲಿ ಅತೃಪ್ತಿ ಇದ್ದು, ಈ ಕಾರಣದಿಂದ ಪಕ್ಷ ತೊರೆಯುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಮಮತಾ ಬ್ಯಾನರ್ಜಿಯವರು ಪ್ರಧಾನಿ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಬಹಿರಂಗವಾಗಿ ಪ್ರತಿಪಾದಿಸುತ್ತಾ ಬಂದ ಅವರು, ಕಳೆದ ಎರಡು ವರ್ಷಗಳಿಂದ ತ್ರಿಪುರಾ ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ಮಾಡುತ್ತಾ ಬಂದಿದ್ದರು. ತ್ರಿಪುರಾದಲ್ಲಿ ಮಹತ್ವದ ಸಾಧನೆಗೆ ಮುಂದಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ದಾಸ್ ಶೀಘ್ರವೇ ಸೇರ್ಪಡೆಯಾಗಲಿದ್ದಾರೆ.
ಬಿಜೆಪಿ ಸರ್ಕಾರದ ದುರಾಡಳಿತಗಳಿಗೆ ಪ್ರಾಯಶ್ರಿತವಾಗಿ ನಾನು ಇಂದು ತಲೆ ಬೋಳಿಸಿಕೊಂಡಿದ್ದೇನೆ. ನಾನು ಪಕ ತೊರೆಯಲು ನಿರ್ಧರಿಸಿದ್ದು, ಮುಂದಿನ ಹೆಜ್ಜೆಯನ್ನು ನಿರ್ಧರಿಸಬೇಕಾಗಿದೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಉಂಟಾಗಿರುವ ಅರಾಜಕತೆ ಮತ್ತು ದುರಾಡಳಿತದಿಂದಾಗಿ ಕಳೆದ ಎರಡು ವರ್ಷದಿಂದ ಪಕ್ಷದಿಂದ ದೂರ ಉಳಿದ್ದಿದ್ದೇನೆ. ಹಾಗೂ ಪಕ್ಷ ಮತ್ತು ರಾಜಕೀಯ ಮೀರಿ ಜನಪರವಾಗಿ ಕೆಲಸ ಮಾಡುತ್ತೇನೆ’ ಎಂದು ದಾಸ್ ವಿವರಿಸಿದರು.