Mexico : “ಪ್ರೀತಿ ಒಂದು ಮಾಯೆ”, “ಪ್ರೀತಿ(Love) ಕುರುಡು ಅದಕ್ಕೆ ಕಣ್ಣಿಲ್ಲ”ಎಂದು ಹೇಳುತ್ತಾರೆ ಹಿರಿಯರು. ಆದರೆ, ಈ ಪ್ರೀತಿ ಎನ್ನುವ ಎರಡಕ್ಷರದ ಪದಕ್ಕಿರುವ ಶಕ್ತಿ, ಜಗತ್ತಿನಲ್ಲಿ ಬೇರೆ ಯಾವುದೇ ಪದಕ್ಕಿಲ್ಲ ಎನ್ನುವುದು ಪ್ರೇಮಿಗಳ ಮಾತು.
ಪ್ರೀತಿಸಿದವರು ನಮ್ಮ ಜೊತೆ ಇದ್ದರೆ ಬದುಕು ಸ್ವರ್ಗವಾಗುತ್ತದೆ, ಪ್ರೀತಿ ಕೈತಪ್ಪಿ ಹೋದರೆ ಬದುಕು ನರಕವಾಗುತ್ತದೆ. ಪ್ರೀತಿಸಿದ ಹುಡುಗ ಮೋಸ ಮಾಡಿ ಬೇರೆಯವರೊಡನೆ ಮದುವೆಯಾದರೆ, ಅಥವಾ ಪ್ರೀತಿಸಿದ ಹುಡುಗಿ ಬೇರೆಯವರೊಂದಿಗೆ ಮದುವೆಯಾದರೆ, ಆ ನೋವು ಜೀವನ ಪರ್ಯಂತ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ಒಟ್ಟಿನಲ್ಲಿ ಈ ಪ್ರೀತಿ ಎನ್ನುವ ಪದಕ್ಕೆ ಅಗಾಧವಾದ ಶಕ್ತಿ ಇದೆ ಎಂದು ಹೇಳಬಹುದು. “ಪ್ರೇಮ ಮಧುರ, ತ್ಯಾಗ ಅಮರ” ಎನ್ನುವ ವಾಕ್ಯ ಬಹಳ ಜನಪ್ರಿಯ. ಆದರೆ ಇಲ್ಲೊಬ್ಬಳು ಮಹಾನ್ ಮಹಿಳೆ, ಪ್ರೀತಿಸಿದ ಹುಡುಗನನ್ನೇ ತ್ಯಾಗ ಮಾಡಿದ್ದಾಳೆ. ಅದು ಯಾವ ಕಾರಣಕ್ಕೆ ಎಂದು ತಿಳಿದರೆ ನೀವು ಅಚ್ಚರಿಗೊಳ್ಳುವುದು ಖಂಡಿತ.
ಹೌದು, ಇಂಥದ್ದೊಂದು ಪ್ರೇಮ ಪ್ರಸಂಗ ಜರುಗಿರುವುದು ಮೆಕ್ಸಿಕೋ(Mexico) ದೇಶದಲ್ಲಿ. ಉಜಿಲ್ ಮಾರ್ಟಿನೇಜ್ ಎಂಬ ಶಿಕ್ಷಕ, ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ(California) ವಾಸವಾಗಿದ್ದ. ಇವರಿಗೆ ಒಬ್ಬಳು ಪ್ರೇಯಸಿ ಇದ್ದಳು, ಆಕೆಯ ತಾಯಿ ಕಿಡ್ನಿ ಸಮಸ್ಯೆಯಿಂದ ಬಳಲ್ತಿದ್ದರು. ಆಗ ಸಹಾಯಕ್ಕೆ ಬಂದವನು ಇದೇ ಉಜಿಲ್.
ಹಿಂದೆ ಮುಂದೆ ನೋಡದ ಈ ವ್ಯಕ್ತಿ, ತನ್ನ ಒಂದು ಕಿಡ್ನಿಯನ್ನೇ ಪ್ರೇಯಸಿಯ ತಾಯಿಗೆ ನೀಡಿ ಆಕೆಯ ಪ್ರಾಣ ಉಳಿಸಿದ್ದಾನೆ. ಇದಾದ ತಿಂಗಳೊಳಗೆ, ಅವನ ಬಾಳಲ್ಲಿ ಅಕ್ಷರಶಃ ಸಿಡಿಲು ಬಡಿದಂತಾಗಿದೆ. ತಾಯಿಗೆ ಕಿಡ್ನಿ ಜೋಡಣೆಯಾದ ಬಳಿಕ, ಆ ಪ್ರಿಯತಮೆ ಬೇರೆಯೊಬ್ಬನ ಕೈ ಹಿಡಿದು ಶಾಕ್ ನೀಡಿದ್ದಾಳೆ.
ಒಂದೇ ಕಿಡ್ನಿಯವನನ್ನ ಕಟ್ಟಿಕೊಂಡು ನಾನೇನು ಮಾಡಲಿ? ಆತನೊಂದಿಗೆ ಬದುಕೋಕೆ ಸಾಧ್ಯಾನಾ? ಎಂದು ಆಕೆ ಇಂತಹ ನಿರ್ಧಾರ ಕೈಗೊಂಡಿದ್ದಾಳಂತೆ. ಇದಕ್ಕೆ ಉಜಿಲ್ ಪ್ರತಿಕ್ರಿಯೆ ಹೀಗಿದೆ, “ನನ್ನ ಪ್ರೇಯಸಿಯ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಒಂದು ಕಿಡ್ನಿಯ ಅವಶ್ಯಕತೆ ಇದ್ದಾಗ,
ನಾನು ನನ್ನ ಒಂದು ಕಿಡ್ನಿಯನ್ನು ಅವರಿಗೆ ನೀಡಿದ್ದೇನೆ, ಆದರೆ ಆಕೆ ಇದ್ಯಾವುದನ್ನೂ ಲೆಕ್ಕಿಸದೆ ಒಂದು ತಿಂಗಳೊಳಗೆ ನನ್ನನ್ನು ಬಿಟ್ಟು ಬೇರೆವರೊಂದಿಗೆ ವಿವಾಹವಾಗಿದ್ದಾಳೆ” ಎಂದು ತನಗಾದ ಮೋಸವನ್ನು ಹೇಳಿ ಕೊಂಡಿದ್ದಾನೆ. ಇವರು ಟಿಕ್ಟಾಕ್ ನಲ್ಲಿ ಹಾಕಿದಂತಹ ವೀಡಿಯೋ ಸುಮಾರು 16 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ.
ಕೆಲವರು ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, “ಆಕೆ ಒಂದು ಒಳ್ಳೆಯ ವ್ಯಕ್ತಿತ್ವನ್ನು ಕಳೆದುಕೊಂಡಿದ್ದಾಳೆ” ಎಂದು ಉಜಿಲ್ ನನ್ನು ಬೆಂಬಲಿಸಿದ್ದಾರೆ. “ನಿಮ್ಮ ಪ್ರೀತಿಯನ್ನು ವರ್ಣಿಸಲು ಪದಗಳು ಸಾಲದು, ನೀವು ಎಲ್ಲ ಪ್ರೇಮಿಗಳಿಗೂ ಮಾದರಿ” ಎಂದು ಕೊಂಡಾಡಿದ್ದಾರೆ.
ಇಷ್ಟದರೂ ಸಹ, ಉಜಿಲ್ ಮತ್ತು ಆತನ ಮಾಜಿ ಪ್ರೇಯಸಿಯು ಇಬ್ಬರು ಚೆನ್ನಾಗಿಯೇ ಇದ್ದಾರಂತೆ. “ಈ ಘಟನೆಯಾದ ನಂತರ ಸಹ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ಒಬ್ಬರಿಗೊಬ್ಬರು ಹೆಚ್ಚು ದ್ವೇಷಿಸದೇ ಮತ್ತು ಪ್ರೀತಿಸದೇ ಸ್ನೇಹಪರ ಬಾಂಧವ್ಯವನ್ನು ಹೊಂದಿದ್ದೇವೆ” ಎಂದು ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
- ಪವಿತ್ರ