- ಔಷಧ ಆಮದು ಮೇಲೆ ಶೇ.100 ಸುಂಕ ಹೇರಿದ ಅಮೇರಿಕಾ ಅಧ್ಯಕ್ಷ
- ಭಾರತದ ಫಾರ್ಮಾ ವಲಯಕ್ಕೆ ಬಹು ದೊಡ್ಡ ಸವಾಲು
- ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಟ್ರಂಪ್ ಆದೇಶ
Washington : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೊಂದು ವಿವಾದಾತ್ಮಕ ನಿರ್ಧಾರ ಕೈಗೊಂಡಿದ್ದಾರೆ. (trump-imposes-new-tariff-on-drug-imports)
ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸುಂಕಗಳನ್ನು ಹೇರಿರುವ ಟ್ರಂಪ್, ಈ ಬಾರಿ ಔಷಧೀಯ ಆಮದುಗಳ ಮೇಲೂ ಭಾರೀ ಹೊಡೆತ ನೀಡಿದ್ದಾರೆ.
ಅಕ್ಟೋಬರ್ 1, 2025ರಿಂದ ಅಮೆರಿಕಕ್ಕೆ ಆಮದು ಆಗುವ ಎಲ್ಲಾ ಬ್ರ್ಯಾಂಡ್ (Brand) ಹಾಗೂ ಪೇಟೆಂಟ್ ಪಡೆದ ಔಷಧಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅವರು ಸಹಿ ಹಾಕಿದ್ದಾರೆ.

ಈ ನಿರ್ಧಾರದಿಂದಾಗಿ ಭಾರತ ಸೇರಿದಂತೆ ಅಮೆರಿಕಕ್ಕೆ (America) ಔಷಧಗಳನ್ನು ರಫ್ತು ಮಾಡುವ ರಾಷ್ಟ್ರಗಳು ನೇರವಾಗಿ ಬಾಧಿತವಾಗಲಿವೆ.
ಇನ್ನು ಡೊನಾಲ್ಡ್ ಟ್ರಂಪ್ ಘೋಷಿಸಿದಂತೆ, “ಯಾವುದೇ ವಿದೇಶಿ ಕಂಪನಿಯು ಅಮೆರಿಕ ಮಾರುಕಟ್ಟೆಗೆ ಬ್ರ್ಯಾಂಡೆಡ್ ಅಥವಾ ಪೇಟೆಂಟ್ (Patent) ಪಡೆದ ಔಷಧಗಳನ್ನು ಆಮದು ಮಾಡಿದರೆ, ಅದಕ್ಕೆ ಶೇ.100ರಷ್ಟು ಸುಂಕ ಕಟ್ಟಲೇಬೇಕಾಗುತ್ತದೆ.
ಆದರೆ ಕಂಪನಿ ಅಮೆರಿಕದೊಳಗೆ ತನ್ನದೇ ಉತ್ಪಾದನಾ ಘಟಕವನ್ನು ಸ್ಥಾಪಿಸಿದರೆ, ಅದಕ್ಕೆ ಈ ನಿಯಮ ಅನ್ವಯಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದಲ್ಲಿ ಮೊದಲಿಗಿಂತ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಳವಾಗಬೇಕು ಹಾಗೂ ಆರ್ಥಿಕ ಕೊರತೆ ತಗ್ಗಬೇಕು ಎಂಬ ಉದ್ದೇಶವನ್ನು ಟ್ರಂಪ್ ಆಡಳಿತ ಹೊಂದಿದೆ ಎಂದು ವಲಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಭಾರತವು ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಔಷಧ ರಫ್ತುಗಾರ ರಾಷ್ಟ್ರಗಳಲ್ಲಿ ಒಂದಾಗಿದೆ. (trump-imposes-new-tariff-on-drug-imports)
ವಿಶೇಷವಾಗಿ ಅಮೆರಿಕ ಭಾರತದ ಪ್ರಮುಖ ಮಾರುಕಟ್ಟೆ. ಅಮೆರಿಕದ ಆರೋಗ್ಯ ಕ್ಷೇತ್ರದಲ್ಲಿ ಬಳಸುವ ಹಲವಾರು ಔಷಧೀಯ ಉತ್ಪನ್ನಗಳನ್ನು ಭಾರತದಿಂದಲೇ ಆಮದು ಮಾಡಲಾಗುತ್ತದೆ.
ಕಡಿಮೆ ವೆಚ್ಚದ ಜನರಿಕ್ ಔಷಧಗಳಿಂದ ಹಿಡಿದು ವಿವಿಧ ಪೇಟೆಂಟ್ ಉತ್ಪನ್ನಗಳವರೆಗೆ, ಭಾರತೀಯ ಕಂಪನಿಗಳ ಪಾಲು ಅತಿ ದೊಡ್ಡದಾಗಿದೆ.
ಈಗ ಟ್ರಂಪ್ ಅವರ ಹೊಸ ಸುಂಕ ನೀತಿಯಿಂದಾಗಿ, ಅಮೆರಿಕ ಮಾರುಕಟ್ಟೆಯಲ್ಲಿ ಭಾರತೀಯ ಔಷಧಗಳ ದರ ದ್ವಿಗುಣವಾಗಲಿದೆ.
ಇದರಿಂದ ಭಾರತೀಯ ಕಂಪನಿಗಳ ಸ್ಪರ್ಧಾತ್ಮಕ ಶಕ್ತಿ ಕುಗ್ಗುವ ಅಪಾಯ ಹೆಚ್ಚಾಗಿದೆ.
ಅಮೆರಿಕದ ಗ್ರಾಹಕರಿಗೂ ಈ ನಿರ್ಧಾರ ಸುಲಭದದ್ದಲ್ಲ. ಭಾರತ, ಚೀನಾ ಮುಂತಾದ ದೇಶಗಳಿಂದ ಕಡಿಮೆ ದರದಲ್ಲಿ ದೊರೆಯುತ್ತಿದ್ದ ಔಷಧಗಳು ಈಗ ದುಬಾರಿಯಾಗಲಿವೆ.
ಶೇ.100ರಷ್ಟು ಸುಂಕದಿಂದಾಗಿ ಒಂದು ಪ್ಯಾಕೇಜ್ ಔಷಧಿಯ ಬೆಲೆ ನೇರವಾಗಿ ದ್ವಿಗುಣವಾಗುವ ಸಾಧ್ಯತೆ ಇದೆ. ಇದರಿಂದ ಅಮೆರಿಕದ ಸಾಮಾನ್ಯ ರೋಗಿಗಳಿಗೆ ಹೆಚ್ಚಿನ ಆರ್ಥಿಕ ಒತ್ತಡ ಎದುರಾಗಲಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಹಲವು ಬಾರಿ “Made in USA” ಎಂಬ ಘೋಷಣೆಯನ್ನು ಒತ್ತಿ ಹೇಳಿದ್ದಾರೆ.
ತಾವು ಅಧ್ಯಕ್ಷರಾಗಿರುವವರೆಗೆ ವಿದೇಶಗಳಿಂದ ಆಮದು ಮಾಡುವುದನ್ನು ಕಡಿಮೆ ಮಾಡಿ, ದೇಶೀಯ ಉತ್ಪಾದನೆಗೆ ಹೆಚ್ಚು ಉತ್ತೇಜನ ನೀಡುವುದು ತಮ್ಮ ಪ್ರಧಾನ ಗುರಿ ಎಂದು ಹೇಳಿದ್ದಾರೆ.
ಇತ್ತೀಚಿನ ಔಷಧ ಸುಂಕ ನಿರ್ಧಾರವೂ ಅದೇ ದಾರಿಯಲ್ಲಿ ನಡೆದ ಇನ್ನೊಂದು ಹೆಜ್ಜೆ.ಟ್ರಂಪ್ ಅವರ ಪ್ರಕಾರ ಅಮೆರಿಕದಲ್ಲೇ ಉತ್ಪಾದನೆ ನಡೆಯುವುದರಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ, ಸರ್ಕಾರದ ತೆರಿಗೆ ಆದಾಯ ಏರುತ್ತದೆ, ಬಜೆಟ್ ಕೊರತೆ ತಗ್ಗುತ್ತದೆ.
ಆದರೆ ತಜ್ಞರ ಅಭಿಪ್ರಾಯದಲ್ಲಿ, ಈ ನಿರ್ಧಾರದಿಂದ ಸ್ವಲ್ಪಕಾಲ ಅಮೆರಿಕದ ಆರ್ಥಿಕತೆಗೆ ಸಹಾಯವಾದರೂ, ದೀರ್ಘಕಾಲದಲ್ಲಿ ಗ್ರಾಹಕರ ಮೇಲೆ ಹೆಚ್ಚಿನ ಭಾರ ಬೀಳಬಹುದು.
ಭಾರತ ಸರ್ಕಾರ ಮತ್ತು ಔಷಧೋದ್ಯಮ ಸಂಘಟನೆಗಳು ಅಮೆರಿಕದ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ. ಸಾಧ್ಯವಾದರೆ ರಾಜತಾಂತ್ರಿಕ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು.
ಇಲ್ಲವಾದರೆ ಭಾರತೀಯ ಕಂಪನಿಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿ, ಅಮೆರಿಕದೊಳಗೆ ಹೂಡಿಕೆ ಮಾಡಲು ತೀರ್ಮಾನಿಸಬಹುದು.ಮುಂದಿನ ತಿಂಗಳುಗಳಲ್ಲಿ ಈ ನಿರ್ಧಾರ ಜಾರಿಗೆ ಬರುವಂತೆ, ಜಾಗತಿಕ ಫಾರ್ಮಾ ವಲಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.