Turkey : ಟರ್ಕಿಯಲ್ಲಿ ಉಂಟಾದ ಭೂಕಂಪ ಪೀಡಿತ ಪ್ರದೇಶಗಳಿಂದ ಜನರು ಪಲಾಯನ ಮಾಡುತ್ತಿದ್ದಾರೆ. ಈ ಒಂದು ಬಲವಾದ ಕಾರಣದ ಹಿನ್ನೆಲೆ ವಿಮಾನಯಾನ ಸಂಸ್ಥೆಗಳು ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸಲು ಇದೀಗ ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಟರ್ಕಿಯಲ್ಲಿ(Turkey) ಭೂಕಂಪ ಪೀಡಿತ ಪ್ರದೇಶಗಳಿಂದ ಸಾವಿರಾರು ಜನರು ಪಲಾಯನ ಮಾಡುತ್ತಿದ್ದಾರೆ. ಟರ್ಕಿಯ ಏರ್‌ಲೈನ್ಸ್(Turkish Airlines) ಮತ್ತು ಪೆಗಾಸಸ್ ಏರ್‌ಲೈನ್ಸ್ ಭಾನುವಾರ ಪೀಡಿತ ಪ್ರದೇಶಗಳಿಂದ ಇಸ್ತಾನ್‌ಬುಲ್, ಅಂಕಾರಾ, ಅಂಟಲ್ಯ ಮತ್ತು ಇತರ ಸುರಕ್ಷಿತ ಸ್ಥಳಗಳಿಗೆ ತೆರಳಲು ಉಚಿತ ಟಿಕೆಟ್‌ಗಳನ್ನು ಘೋಷಿಸಿವೆ.
ಅನೇಕ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗಳು ಮತ್ತು ಪ್ರವಾಸಿ ರೆಸಾರ್ಟ್‌ಗಳಲ್ಲಿನ ಕೆಲವು ಹೋಟೆಲ್‌ಗಳನ್ನು ಸಂತ್ರಸ್ತರಿಗೆ ಮೀಸಲಿಡಲಾಗಿದೆ ಎಂದು ಹೇಳಲಾಗಿದೆ. ಗಾಜಿಯಾಂಟೆಪ್, ಹಟೈ, ನೂರ್ಡಗಿ ಮತ್ತು ಮರಾಶ್‌ನ ಸಾವಿರಾರು ಜನರು ಪೀಡಿತ ಪ್ರದೇಶವನ್ನು ಈಗಾಗಲೇ ತೊರೆದಿದ್ದಾರೆ. ಸುರಕ್ಷಿತ ಸ್ಥಳಗಳಿಗೆ ತೆರಳಲು ಸಾವಿರಾರು ಜನರು ಗಾಜಿಯಾಂಟೆಪ್(Gajiyampet) ವಿಮಾನ ನಿಲ್ದಾಣದಲ್ಲಿ ತಂಗಿದ್ದಾರೆ! ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರಿ ಭೂಕಂಪದ ನಂತರ ರಕ್ಷಣಾ ಪಡೆಗಳು ಅವಶೇಷಗಳನ್ನು ಹುಡುಕುವ ಮೂಲಕ ಪಾರುಗಾಣಿಕಾ ಕಾರ್ಯಾಚರಣೆಗಳು ಕಳೆದ ಒಂದು ವಾರದಿಂದ ನಡೆಯುತ್ತಿದೆ.
ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ಇಲ್ಲಿಯವರೆಗೂ ಸಂಭವಿಸದ ಅತ್ಯಂತ ಭೀಕರ ಭೂಕಂಪ ಎಂದು ದಾಖಲಾಗಿದೆ! ಅವಶೇಷಗಳಡಿ ಸಿಲುಕಿದ್ದ ಹಲವರನ್ನು ಶನಿವಾರ ರಾತ್ರಿ ರಕ್ಷಿಸಲಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶನಿವಾರ ಮಾಲತ್ಯದಲ್ಲಿರುವ ಹೋಟೆಲ್‌ನ ಅವಶೇಷಗಳಡಿಯಿಂದ ಭಾರತೀಯ(Indian) ಪ್ರಜೆಯ ಮೃತದೇಹ ಪತ್ತೆಯಾಗಿದ್ದು, ಒಂದೆಡೆದು ದಿನಗಳ ನಂತರ ವ್ಯಕ್ತಿಯನ್ನು ವಿಜಯ್ ಕುಮಾರ್(Vijay Kumar) ಎಂದು ಗುರುತಿಸಲಾಗಿದೆ.
ಭಾರತೀಯ ಪ್ರಜೆಯ ಮೃತದೇಹ ಪತ್ತೆಯಾಗಿದೆ ಎಂದು ಟರ್ಕಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಟರ್ಕಿ, ಸಿರಿಯಾದಲ್ಲಿ ರಣಭೀಕರ ಭೂಕಂಪ : ಭಾರಿ ಭೂಕಂಪಗಳು ಟರ್ಕಿಯ ಪ್ರದೇಶಗಳಲ್ಲಿ ಸಂಭವಿಸಿದ ಹಿನ್ನೆಲೆ ಸುಮಾರು 26,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರನ್ನು ಭೂಕಂಪ ಸಂಭವಿಸಿದ ಜಾಗದಿಂದ ಸ್ಥಳಾಂತರಿಸಲಾಗಿದೆ.
ಸಿರಿಯನ್ ಗಡಿಗೆ ಸಮೀಪವಿರುವ ಗಾಜಿಯಾಂಟೆಪ್ ಬಳಿ ಮೊದಲ ಭೂಕಂಪನವು 7.8 ತೀವ್ರತೆಯನ್ನು ಹೊಂದಿದೆ. ಎರಡನೆಯದು ಒಂಬತ್ತು ಗಂಟೆಗಳ ನಂತರ ಸಂಭವಿಸಿದೆ ಮತ್ತು ರಿಕ್ಟರ್ ಮಾಪಕದಲ್ಲಿ 7.6 ಅನ್ನು ಅಳೆಯಿತು. ಭೂಕಂಪಗಳು ಟರ್ಕಿ ಮತ್ತು ಸಿರಿಯಾದಲ್ಲಿ ಭಾರಿ ಹಾನಿಯನ್ನು ಉಂಟು ಮಾಡಿದ್ದು, ಎರಡು ರಾಷ್ಟ್ರಗಳಲ್ಲಿ ದುರಂತ ಸಂಭವಿಸಿದಾಗಿನಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಸಲಾಗುತ್ತಿದೆ.