ರಾಮನಗರ, ಫೆ. 09; ರಾಮನಗರದ ಬಿಡದಿಯಲ್ಲಿರುವ ಟೊಯೋಟಾ ಕಾರು ತಯಾರಿಕಾ ಘಟಕದಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಬಿಕ್ಕಟ್ಟು ಉಂಟಾಗಿದ್ದು, ಸರ್ಕಾರದ ಸಮಸ್ಯೆ ಇತ್ಯರ್ಥಪಡಿಸಲು ಆಡಳಿತ ಮಂಡಳಿಗೆ ಎರಡು ದಿನಗಳ ಗಡುವು ನೀಡಿದೆ.
ಕಾರು ತಯಾರಿಕಾ ಘಟಕದ ಕಾರ್ಮಿಕರು 92 ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈಗ ಕಾರ್ಖಾನೆಯ ಬಿಕ್ಕಟ್ಟು ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ತ್ರಿಪಕ್ಷೀಯ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು ಆಡಳಿತ ಮಂಡಳಿಗೆ ಸಮಸ್ಯೆ ಇತ್ಯರ್ಥಕ್ಕೆ ಎರಡು ದಿನಗಳ ಗಡುವು ನೀಡಿದ್ದಾರೆ.
ಸರ್ಕಾರದ ಪ್ರತಿನಿಧಿಗಳು, ಟೊಯೋಟಾ ಕಾರ್ಮಿಕರು ಮತ್ತು ಟೊಯೋಟಾ ಆಡಳಿತ ಮಂಡಳಿಯ ನಡುವೆ ಬೆಂಗಳೂರಿನ ಖನಿಜ ಭವನದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ಸಮಸ್ಯೆ ಅಲಿಸಿದ ನಂತರ ಅಂತಿಮವಾಗಿ ಕಾರ್ಖಾನೆಯ ಆಡಳಿತ ಮಂಡಳಿಗೆ ಸಮಸ್ಯೆಯ ಇತ್ಯರ್ಥಕ್ಕೆ ಎರಡು ದಿನಗಳ ಗಡವು ನೀಡಲಾಯಿತು.
ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಬೆಂಗಳೂರು ಸಂಸದ ಡಿ. ಕೆ. ಸುರೇಶ್, ಮಾಗಡಿ ಶಾಸಕ ಎ. ಮಂಜುನಾಥ್ ಮತ್ತು ಎಂಎಲ್‌ಸಿ ಸಿ. ಎಂ. ಲಿಂಗಪ್ಪ ಸೇರಿದಂತೆ ಹಲವು ಉಪಸ್ಥಿತರಿದ್ದರು.
ಕಳೆದ ವಾರ ವಿಧಾನಸಭೆ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಜಿ. ಕರುಣಾಕರ ರೆಡ್ಡಿ ಕಾರ್ಮಿಕರ ಪ್ರತಿಭಟನೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಆಗ ಉತ್ತರ ನೀಡಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, “ಖುದ್ದಾಗಿ ನಾನು ಕಾರ್ಖಾನೆಗೆ ಭೇಟಿ ನೀಡಿ ವಿವಾದ ಇತ್ಯರ್ಥ ಮಾಡಲು ಪ್ರಯತ್ನ ನಡೆಸಿದ್ದೆ. ಬೆಂಗಳೂರಲ್ಲಿ ಸಭೆ ನಡೆಸಿದಾಗ ಕಾರ್ಮಿಕ ಮುಖಂಡರು ಹಾಜರಾಗಲಿರಲಿಲ್ಲ” ಎಂದು ಹೇಳಿದ್ದರು.
“3,415 ಕಾರ್ಮಿಕರ ಪೈಕಿ 1896 ಮಂದಿ ಈಗಾಗಲೇ ಕೆಲಸಕ್ಕೆ ಹಾಜರಾಗಿದ್ದಾರೆ. ವಿವಾದವನ್ನು ಇತ್ಯರ್ಥಪಡಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ” ಎಂದು ಸದನಕ್ಕೆ ಸಚಿವರು ಮಾಹಿತಿ ನೀಡಿದ್ದರು.