ಮುಂಬೈ ಡಿ 25 : ಉದ್ದವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಬೆದರಿಕೆ ಹಾಕಿದ ವ್ಯಕ್ತಿಯನ್ನು ಬೆಂಗಳೂರು ಮೂಲದವನು ಎಂದು ಗುರುತಿಸಲಾಗಿದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ, ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಮುಂಬೈ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬೆಂಗಳೂರು ಮೂಲದ ಜೈಸಿಂಗ್ ರಜಪೂತ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ದಿವಂಗತ ನಟ ಸುಶಾಂತ್ ಸಿಂಗ್ ರಜಪೂರ ಅವರ ಅಭಿಮಾನಿ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಆದಿತ್ಯ ಠಾಕ್ರೆ ಮತ್ತು ಇತರ ಮುಖಂಡರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗೃಹ ಸಚಿವ ದಿಲೀಪ್ ವಾಲ್ಪೆ ಪಾಟೀಲ್ ವಿಶೇಷ ತನಿಖಾ ತಂಡ ( ಸಿಟ್ ) ವನ್ನು ತನಿಖೆಗಾಗಿ ನಿಯೋಜಿಸಿದ್ದರು.
ಘಟನೆಯ ಕುರಿತು ಶಿವಸೇನಾ ಶಾಸಕ ಸುನೀಲ್ ಪ್ರಭು ಅವರು ಆದಿತ್ಯ ಠಾಕ್ರೆ ಅವರಿಗೆ ಜೀವ ಬೆದರಿಕೆ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 500, 506 (2), 67 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.