ಕೇವಲ ತುಂಡು ಬಟ್ಟೆಗಾಗಿ ನಮಗೆ ಶಿಕ್ಷಣ ನಿರಾಕರಿಸಲಾಗುತ್ತಿದೆ. ರಾಜ್ಯ ಸರ್ಕಾರದ ಈ ಕ್ರಮ ಸರಿಯೇ? ದಯವಿಟ್ಟು ನಮಗೆ ಪರೀಕ್ಷೆ ಬರೆಯಲು ಅವಕಾಶ ಕೊಡಿ. ನಮ್ಮ ಬದುಕನ್ನು ಹಾಳು ಮಾಡಬೇಡಿ ಎಂದು ಉಡುಪಿಯ ಹಿಜಾಬ್(Hijab) ಪರ ವಿದ್ಯಾರ್ಥಿನಿ(Student) ಅಲ್ಮಾಸ್ ಶಿಕ್ಷಣ ಸಚಿವ(Education Minister) ನಾಗೇಶ್(BC Nagesh) ಅವರನ್ನು ಟ್ವೀಟರ್ನಲ್ಲಿ ಪ್ರಶ್ನಿಸಿದ್ದಾರೆ.

ಹಿಜಾಬ್ ಧರಿಸಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ನಿರ್ಬಂಧ ಹೇರಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ನಮಗೆ ಅವಕಾಶವಿಲ್ಲ. ದೀರ್ಘ ಕಾಲದಿಂದ ಪರೀಕ್ಷೆಗಾಗಿ ಮಾಡಿಕೊಂಡಿರುವ ತಯಾರ ವ್ಯರ್ಥವಾಗಲಿದೆ. ದಯವಿಟ್ಟು ನಮಗೆ ಅನ್ಯಾಯ ಮಾಡಬೇಡಿ. ನಮಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಅಲ್ಮಾಸ್ ಮನವಿ ಮಾಡಿದ್ದಾಳೆ. ಇನ್ನು ಈಗಾಗಲೇ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಹೈಕೋರ್ಟ್ ತೀರ್ಪಿನ ಅನ್ವಯ ಧಾರ್ಮಿಕ ಗುರುತನ್ನು ಖಚಿತ ಪಡಿಸುವ ಯಾವುದೇ ಉಡುಪನ್ನು ಶಾಲಾ-ಕಾಲೇಜಿನಲ್ಲಿ ಧರಿಸುವಂತಿಲ್ಲ.
ಹೀಗಾಗಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ನ ತ್ರಿಸದಸ್ಯರ ನೇತೃತ್ವದ ಪೀಠ ಅಂತಿಮ ತೀರ್ಪು ನೀಡಿದ್ದು, ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದೆ. ಹೀಗಾಗಿ ಹಿಜಾಬ್ ಪರ ಹೋರಾಟಗಾರ್ತಿಯರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೂ ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನೂ ಕೈಗೆತ್ತಿಕೊಂಡಿಲ್ಲ.

ವಿದ್ಯಾರ್ಥಿನಿಯರ ಭವಿಷ್ಯದ ಹಿತ ದೃಷ್ಟಿಯಿಂದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕೆಂದು ಹಲವು ಬಾರಿ ಮನವಿ ಮಾಡಿದರು, ಪರೀಕ್ಷೆಗೂ, ಈ ಅರ್ಜಿಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣವನ್ನು ಇನ್ನಷ್ಟು ಸೂಕ್ಷ್ಮಗೊಳಿಸಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿದೆ.