ವಾಷಿಂಗ್ಟನ್ ಜ 25 : ಉಕ್ರೇನ್ನಲ್ಲಿ ಸಂಭವಿಸಿರುವ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಮೆರಿಕ 8500 ಸೈನಿಕರನ್ನು ಸಜ್ಜುಗೊಳಿಸಿದೆ. ರಷ್ಯಾದ ಒತ್ತಡ ಕ್ರಮಗಳ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕರೆ ನೀಡಿದ್ದಾರೆ.
ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಅವರು, ಉಕ್ರೇನ್ ಮೇಲೆ ಆಕ್ರಮಣ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಹೇಳುತ್ತಿದ್ದಾರೆ. ಆದಾಗ್ಯೂ, ರಷ್ಯಾ 2014ರಲ್ಲಿಯೇ ವಶಕ್ಕೆ ಪಡೆದಿರುವ ಕ್ರಿಮಿಯಾ ಪ್ರದೇಶದಲ್ಲಿ 1 ಲಕ್ಷ ಸೈನಿಕರನ್ನು ನಿಯೋಜಿಸಲಾಗಿದೆ.
‘ಅಮೆರಿಕ ಸೇನೆಯ 8,500 ಸೈನಿಕರನ್ನು ಅತ್ಯಂತ ಜಾಗರೂಕವಾಗಿರುವಂತೆ ಸನ್ನದ್ಧಗೊಳಿಸಲಾಗಿದೆ. ಆದರೆ, ಇನ್ನೂ ಉಕ್ರೇನ್ ನಲ್ಲಿ ನಿಯೋಜನೆಗೊಳಿಸಿಲ್ಲ. ನ್ಯಾಟೊ ಪಡೆ ಕಾರ್ಯಾಚರಣೆ ಆರಂಭಿಸಿದರೆ, ಬೆಂಬಲ ನೀಡುವ ಸಲುವಾಗಿ ಬಹುತೇಕ ಸೈನಿಕರನ್ನು ಬಳಸಿಕೊಳ್ಳಲಾಗುವುದು’ ಎಂದು ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ಪುಟೀನ್ ಅವರಿಗೆ ಸಂದೇಶ ರವಾನಿಸುವ ಸಲುವಾಗಿ ‘ನಾವು ನಮ್ಮ ಜವಾಬ್ದಾರಿಯನ್ನು ನ್ಯಾಟೊ ಜೊತೆಗೆ ಗಂಭೀರವಾಗಿ ನಿರ್ವಹಿಸಲಿದ್ದೇವೆ. ಎಂದು ಅವರು ಹೇಳಿದ್ದಾರೆ. ಭದ್ರತೆಯನ್ನು ಹೆಚ್ಚಿಸಲು ಜೆಟ್ಗಳು ಹಾಗೂ ಸೇನಾ ನೌಕೆಗಳನ್ನು ಕಳುಹಿಸುತ್ತಿರುವುದಾಗಿ ನ್ಯಾಟೊ ಸಹ ತಿಳಿಸಿದೆ.
ಉಕ್ರೇನ್ ಅನ್ನು ನ್ಯಾಟೊ ಒಕ್ಕೂಟಕ್ಕೆ ಸೇರಿಸಲಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ರಷ್ಯಾ ಬೇಡಿಕೆ ಇಟ್ಟಿದೆ. ಇದನ್ನು ತಿರಸ್ಕರಿಸಿರುವ ಅಮೆರಿಕ ಮತ್ತು ನ್ಯಾಟೊ, ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ, ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾಗೆ ಎಚ್ಚರಿಕೆ ನೀಡಿವೆ.