ಕನ್ನಡ(Kannada) ನಾಡು-ನುಡಿಗೆ ಸಾವಿರಾರೂ ವರ್ಷಗಳ ಇತಿಹಾಸವಿದೆ. ಕನ್ನಡದ ಮೊದಲ ಗ್ರಂಥ ಶ್ರೀವಿಜಯನ ‘ಕವಿರಾಜಮಾರ್ಗ’ದಲ್ಲಿ “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್, ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ, ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ, ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್” ಎಂದು ಉಲ್ಲೇಖಿಸಿರುವುದು ಗಮನಾರ್ಹ.
ಕಾವೇರಿಯಿಂದ ಗೋದಾವರಿಯ ಸೀಮೆಯವರೆಗೂ ಹಬ್ಬಿಕೊಂಡಿದ್ದ ಕನ್ನಡ ಸೀಮೆಯನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಈಗ ಮತ್ತೆ ಕನ್ನಡನಾಡನ್ನು ಒಡೆಯುವ ಮಾತುಗಳು ಕೇಳಿ ಬರುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಸಚಿವ ಉಮೇಶ್ ಕತ್ತಿ(Umesh Katti) ಆಗ್ರಹಿಸಿರುವುದು ಕನ್ನಡದ ಅಸ್ಮಿತೆಗೆ ಮಾಡಿರುವ ಅಪಮಾನವಾಗಿದೆ. ‘ಕನ್ನಡ ಕುಲಪುರೋಹಿತ’ ಆಲೂರು ವೆಂಕಟರಾಯರಂತ ಮಹನೀಯರು ಅಖಂಡ ಕರ್ನಾಟಕದ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದರು.
ಅಖಂಡ ಕರ್ನಾಟಕದ ಕನಸು ಮೊದಲು ಮೊಳಕೆ ಒಡೆದದ್ದು, ಉತ್ತರ ಕರ್ನಾಟಕದಲ್ಲಿ. ಆದರೆ ಇಂದು ಅದೇ ಉತ್ತರ ಕರ್ನಾಟಕದಿಂದ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಸಾವಿರಾರೂ ವರ್ಷಗಳಿಂದ ಕನ್ನಡ ನಾಡನ್ನು ಅಖಂಡತೆಯ ಪರಿಕಲ್ಪನೆಯಲ್ಲಿ ಕಟ್ಟಲಾಗಿದೆ. ಸಾಂಸ್ಕೃತಿಕ ವೈವಿಧ್ಯತೆಗಳ ನಡುವೆಯೂ ಕನ್ನಡ ಭಾಷೆ ನಮ್ಮೆಲ್ಲರನ್ನು ಒಂದುಗೂಡಿಸಿದೆ. “ರಾಜಕೀಯ ಕಾರಣಗಳಿಗಾಗಿ ಸಾವಿರಾರು ಹಿರಿಯ ಕನ್ನಡಿಗರ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು- ನುಡಿಗೆ ಬಗೆವ ದ್ರೋಹವಾಗುತ್ತದೆ” ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನವರ(Siddaramaiah) ಮಾತು ಸ್ವಾಗತಾರ್ಹ.
‘ನಾವೆಲ್ಲರೂ ಕನ್ನಡಿಗರು’ ಎಂಬ ಏಕೈಕ ಧ್ಯೇಯದೊಂದಿಗೆ ನಮ್ಮ ಕರ್ನಾಟಕವನ್ನು ಕಟ್ಟಬೇಕಿದೆ. ಅಖಂಡ ಕನ್ನಡ ನಾಡನ್ನು ಕಟ್ಟಲು ಅವಿರತವಾಗಿ ಶ್ರಮಿಸಿದ ಅನೇಕ ಮಹನೀಯರ ಪರಿಶ್ರಮವನ್ನು ಗೌರವಿಸಬೇಕಿದೆ. ಉಮೇಶ್ ಕತ್ತಿಯವರು ನೀಡಿದ ಹೇಳಿಕೆಯನ್ನು ಪಕ್ಷಾತೀತವಾಗಿ ಖಂಡಿಸಬೇಕು. ಈ ರೀತಿಯ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಕನ್ನಡ ಮನಸುಗಳನ್ನು ಒಡೆಯುವ ಈ ರೀತಿಯ ಅಪ್ರಬುದ್ದ ಹೇಳಿಕೆಗಳನ್ನು ಕನ್ನಡಿಗರೇ ಖಂಡಿಸಬೇಕು.