ಬೆಂಗಳೂರು, ಏ. 29: ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಿದ ವ್ಯಕ್ತಿಯೊಬ್ಬರಿಗೆ “ಸಾಯಿ” ಎಂದು ಹೇಳಿರುವ ಸಚಿವ ಉಮೇಶ್ ಕತ್ತಿ ದರ್ಪದ ಹೇಳಿಕೆ ಇದೀಗ ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಸಚಿವರ ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಮಾತ್ರವಲ್ಲದೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಸಹ ವಿಷಾಧಿಸಿದ್ದಾರೆ.
ಈ ಸಂಬಂಧ ಟ್ವೀಟ್ನಲ್ಲಿ ಕಿಡಿಕಾರಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರೇ ದರ್ಪದ ಉತ್ತರ ನೀಡಿ ಮಾನಸಿಕ ವಿಕೃತಿ ಮೆರೆದಿದ್ದಾರೆ.
ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿರುವುದು ಅತ್ಯಂತ ಅಮಾನವೀಯ.
ಇದನ್ನು ತೀವ್ರವಾಗಿ ಖಂಡಿಸುವೆ. ಜನಸಾಮಾನ್ಯರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ” ಎಂದು ಒತ್ತಾಯಿಸಿದ್ದಾರೆ.