ಬೆಳಗಾವಿ, ಏ. 29: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹಲವು ಬಾರಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ಉಮೇಶ್ ಕತ್ತಿ, ಇದೀಗ ಮತ್ತೊಮ್ಮೆ ತಮ್ಮ ದರ್ಪ ಮೆರೆದಿದ್ದಾರೆ. ಸಚಿವರ ಈ ಹೇಳಿಕೆ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಜೋರಾಗಿದ್ದು ಈ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಕೊರೊನಾ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದಿರುವ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿರುವುದು ವೈರಲ್ ಆಗಿದೆ.
ಅಕ್ಕಿ ಕಡಿತಗೊಳಿಸಿದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಉತ್ತರಿಸಿರುವ ಆಹಾರ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡ್ತಿವಿ. ಲಾಕ್ ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಇದೇ ವೇಳೆ ಲಾಕ್ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ? ಎಂದು ವ್ಯಕ್ತಿ ಸಚಿವರಿಗೆ ಪ್ರಶ್ನಿಸಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಸಾಯೋದು ಒಳ್ಳೆಯದು ಎಂದು ಉಡಾಫೆಯಿಂದ ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದಿದ್ದಾರೆ. ಸಚಿವರ ಈ ಆಡಿಯೋ ವೈರಲ್ ಆಗಿದೆ.