ನವದೆಹಲಿ, ಜೂ. 02: ಬೆಂಗಳೂರು, ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಕಳೆದ 3 ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಕಳೆದೆರಡು ದಿನಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಜೈಪುರದಲ್ಲೂ ಪೆಟ್ರೋಲ್ ದರ ಶತಕ ಬಾರಿಸಿದೆ. ಬೆಂಗಳೂರು, ದೆಹಲಿ, ಜೈಪುರ, ಚೆನ್ನೈ, ಕೊಲ್ಕತ್ತಾ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೆಷ್ಟು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದು ಒಂದಲ್ಲ, ಎರಡಲ್ಲ, ಐದಲ್ಲ, ಹತ್ತಲ್ಲ ಬರೊಬ್ಬರಿ 16 ಬಾರಿ. ಆದರೆ, ಇಂದು ಮಾತ್ರ ಪೆಟ್ರೋಲ್ ದರದಲ್ಲಿ ಏರಿಕೆಯಾಗಿಲ್ಲ, ಇಳಿಕೆಯೂ ಆಗಿಲ್ಲ. ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.49 ರೂ. ಇದೆ. ಮುಂಬೈನಲ್ಲಿ 100.72 ರೂ, ಜೈಪುರದಲ್ಲಿ 101.02 ರೂ, ಬೆಂಗಳೂರಿನಲ್ಲಿ 97.64 ರೂ, ಹೈದರಾಬಾದ್ನಲ್ಲಿ 98.20 ರೂ, ತಿರುವನಂತಪುರದಲ್ಲಿ 96.47 ರೂ, ಚೆನ್ನೈನಲ್ಲಿ 95.99 ರೂ, ಕೊಲ್ಕತ್ತಾದಲ್ಲಿ 94.50 ರೂ. ಇದೆ.
ಭಾರತದ ಕೆಲವು ನಗರಗಳಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಜೈಪುರ, ಭುವನೇಶ್ವರ, ತಿರುವನಂತಪುರದಲ್ಲಿ 1 ಲೀಟರ್ ಡೀಸೆಲ್ ಬೆಲೆ 92 ರೂ. ದಾಟಿದೆ. ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್ಗೆ 85.38 ರೂ. ಇದೆ. ಚೆನ್ನೈನಲ್ಲಿ 90.12 ರೂ, ಮುಂಬೈನಲ್ಲಿ 92.69 ರೂ, ಬೆಂಗಳೂರಿನಲ್ಲಿ 90.51 ರೂ, ಹೈದರಾಬಾದ್ನಲ್ಲಿ 92.54 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.
ಕೊರೋನಾ ಮಹಾಮಾರಿಯಿಂದ ಜನ ಸಾಯುತ್ತಿದ್ದಾರೆ. ಲಾಕ್ಡೌನ್ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ದೇಶದ ಆರ್ಥಿಕ ಚಟುವಟಿಕೆಗೆ ಪಾರ್ಶ್ವವಾಯು ಬಡಿದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ. ಭಾರತದಲ್ಲಿ ಕೊರೋನಾ ವೈರಸ್ ಅಬ್ಬರದಿಂದ ಕಳೆದೊಂದು ವರ್ಷದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಆದಾಯವನ್ನು ಸರಿದೂಗಿಸಲು ಪೆಟ್ರೋಲ್- ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ. ಹಾಗೇ, ಇಂಧನದ ಆಮದಿನ ಪ್ರಮಾಣವೂ ಇಳಿಕೆಯಾಗಿದೆ.
ಮುಂಬೈ, ಭೋಪಾಲ್ ಮತ್ತು ಜೈಪುರ, ಶ್ರೀಗಂಗಾನಗರ, ರೇವಾ, ಪರಬಾನಿ ನಗರಗಳಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿ ಮುನ್ನುಗ್ಗಿದೆ. ಪೆಟ್ರೋಲ್- ಡೀಸೆಲ್ ಬೆಲೆಯ ಹೆಚ್ಚಳ ಎಲ್ಲದರ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಕಾರು, ಬೈಕ್ ಸೇರಿದಂತೆ ಬಹುತೇಕ ಎಲ್ಲ ವಾಹನಗಳ ಬೆಲೆಯೂ ಹೆಚ್ಚಳವಾಗಿದೆ.