ಜಮೈಕಾ: 14ನೇ ಆವೃತ್ತಿಯ ಪುರುಷರ ಅಂಡರ್-19 ವಿಶ್ವಕಪ್ ಟೂರ್ನಿ (Under 19 World Cup) 2022ರ ಜನವರಿ-ಫೆಬ್ರವರಿಯಲ್ಲಿ ವೆಸ್ಟ್ಇಂಡೀಸ್ನಲ್ಲಿ ನಿಗದಿಯಾಗಿದೆ. ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆತಿಥ್ಯವನ್ನು ವಹಿಸಲಿದೆ.
ಬುಧವಾರ (ನವೆಂಬರ್ 17)ದಂದು ಐಸಿಸಿ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ಭಾರತ ಕ್ರಿಕೆಟ್ ತಂಡದ ಜತೆಗೆ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಹಾಗೂ ಉಗಾಂಡ ಜೊತೆ ಸ್ಥಾನ ಪಡೆದಿದೆ. ಜನವರಿ 15ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ಜನವರಿ 14ರಿಂದ ಫೆಬ್ರವರಿ 5ರವರೆಗೆ 48 ಪಂದ್ಯಗಳು ನಡೆಯಲಿವೆ. ಫೆಬ್ರವರಿ 01 ಹಾಗೂ 02ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೆಬ್ರವರಿ 05ರಂದು ಸರ್ ವಿವಿನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯವು ಜರುಗಲಿದೆ. ಕಳೆದ ಆವೃತ್ತಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಹಾಲಿ ಅಂಡರ್ 19 ವಿಶ್ವಕಪ್ ಚಾಂಪಿಯನ್ ಬಾಂಗ್ಲಾದೇಶ, ಇಂಗ್ಲೆಂಡ್, ಕೆನಡಾ ಹಾಗೂ ಯುಎಇ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ. ‘ಸಿ’ ಗುಂಪಿನಲ್ಲಿ ಆಫ್ಘಾನಿಸ್ತಾನ, ಪಾಕಿಸ್ತಾನ, ಪಪುವಾ ನ್ಯೂಗಿನಿ, ಜಿಂಬಾಬ್ವೆ ಹಾಗೂ ‘ಡಿ’ ಗುಂಪಿನಲ್ಲಿ ಆಸ್ಪ್ರೇಲಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ಸ್ಥಾನ ಪಡೆದಿವೆ. ನ್ಯೂಜಿಲೆಂಡ್ ಕೋವಿಡ್ ಪ್ರಯಾಣ ನಿರ್ಬಂಧದ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದು, ಕಿವೀಸ್ ಬದಲಿಗೆ ಸ್ಕಾಟ್ಲೆಂಡ್ ಅಂಡರ್ 19 ವಿಶ್ವಕಪ್ ಟೂರ್ನಿಗೆ ಸೇರ್ಪಡೆಯಾಗಿದೆ. ಜನವರಿ 14ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಅದೇ ದಿನ ಗಯಾನದಲ್ಲಿ ಶ್ರೀಲಂಕಾ ತಂಡವು ಸ್ಕಾಟ್ಲೆಂಡ್ ಸವಾಲನ್ನು ಸ್ವೀಕರಿಸಲಿದೆ
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಒಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2016ರಲ್ಲಿ ನಡೆದ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ಭಾರತ ತಂಡವು ಅತಿ ಹೆಚ್ಚು, ಅಂದರೆ ನಾಲ್ಕು ಬಾರಿ ಅಂಡರ್ 19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ ಮೂರು ಬಾರಿ, ಪಾಕಿಸ್ತಾನ ಎರಡು ಬಾರಿ ಹಾಗೂ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಒಮ್ಮೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಜಯಿಸಿವೆ.